ಆರು ವಿದ್ಯಾರ್ಥಿನಿಯರಿಗೆ ಶಿಷ್ಯ ವೇತನ

24tnpnewsfile01
ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಬನ್ನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆರು ವಿದ್ಯಾರ್ಥಿನಿಯರಿಗೆ ವಿದ್ಯಾ ಜ್ಯೋತಿ ಯೋಜನೆಯಡಿ ಶಿಷ್ಯ ವೇತನ ವಿತರಿಸಲಾಯಿತು.
Published on

ತಿ.ನರಸೀಪುರ: ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ತಾಲೂಕಿನ ಬನ್ನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆರು ವಿದ್ಯಾರ್ಥಿನಿಯರಿಗೆ ಕೆನರಾ ಬ್ಯಾಂಕ್ ವತಿಯಿಂದ ವಿದ್ಯಾಜ್ಯೋತಿ ಯೋಜನೆಯಡಿ ಶಿಷ್ಯವೇತನ ವಿತರಿಸಲಾಯಿತು.

ಬ್ಯಾಂಕ್‌ನ ಸಂಸ್ಥಾಪಕ ಅಮ್ಮೆಂಬಾಳ್ ಸುಬ್ಬರಾವ್ ಪೈ ಅವರ ಸ್ಮರಣಾರ್ಥ ಹಾಗೂ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ಕೆನರಾ ಬ್ಯಾಂಕ್ ವ್ಯವಹಾರಕ್ಕೆ ಸೀಮಿತವಾಗದೆ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಅಭಿನಂದನೀಯ ಎಂದರು.

ಸರ್ಕಾರಿ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಮಕ್ಕಳು ಬ್ಯಾಂಕ್ ವ್ಯವಹಾರಗಳ ಬಗ್ಗೆ ತಿಳಿದುಕೊಳ್ಳುವುದು ಹಾಗೂ ಉಳಿತಾಯದಂತಹ ಜವಾಬ್ದಾರಿಗಳನ್ನು ಈ ಹಂತದಿಂದಲೇ ಪ್ರಾರಂಭಿಸುವುದು ಒಳಿತು ಎಂದು ಸಲಹೆ ನೀಡಿದರು.

ಬ್ಯಾಂಕ್‌ನ ಸ್ಥಳೀಯ ಶಾಖೆಯ ಮುಖ್ಯ ಪ್ರಬಂಧಕ ವಿನಯಸಿಂಗ್ ರಾವತ್ ಮಾತನಾಡಿದರು. ಬ್ಯಾಂಕ್‌ನ ಅಮೂಲ್ಯ ಆರ್ಥಿಕ ಸಾಕ್ಷರತಾ ಸಲಹೆಗಾರ ಎಸ್. ವಿ.ರಮೇಶ್‌ರಾವ್ ಬ್ಯಾಂಕ್ ವಹಿವಾಟು, ಶಾಖೆಗಳ ಕುರಿತು ಹಾಗೂ ಸಾಲ ಸೌಲಭ್ಯ ಯೋಜನೆಗಳ ಕುರಿತು ಪ್ರಬಂಧಕ ದೀಪು ವಿವರ ನೀಡಿದರು.

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ಶಾಲೆ ಮುಖ್ಯ ಶಿಕ್ಷಕ ಮಂಟೇಸ್ವಾಮಿ, ಬ್ಯಾಂಕ್ ಸಿಬ್ಬಂದಿ ಅಖಿಲ್ ಕಶ್ಯಪ್, ಲೋಕೇಶ್, ಗಂಗಾಧರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net