

ವಿಜಯವಾಣಿ ಸುದ್ದಿಜಾಲ ಕುಶಾಲನಗರ
ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಸರ್ಕಾರದ ಪಾಪದ ಕೊಡ ತುಂಬಿದೆ. ೬ ತಿಂಗಳ ಬಳಿಕ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದ್ದು, ಎಚ್.ಡಿ. ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಪಂಚರತ್ನ ಯೋಜನೆ ಮೂಲಕ ಜೆಡಿಎಸ್ ವಿಧಾನಸಭೆ ಚುನಾವಣೆ ಎದುರಿಸುತ್ತಿದೆ. ಪಂಚರತ್ನದಲ್ಲಿ ಘೋಷಿಸಿರುವುದನ್ನು ೫ ವರ್ಷದಲ್ಲಿ ಅನುಷ್ಠಾನಕ್ಕೆ ತರದಿದ್ದಲ್ಲಿ ಪಕ್ಷ ವಿಸರ್ಜಿಸುತ್ತೇವೆಂದು ಬುಧವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಉಚಿತ ಶಿಕ್ಷಣ, ಆರೋಗ್ಯ ನೀಡ ಲಾಗುವುದು. ರಾಜ್ಯದಲ್ಲಿ ಹರಿದು ಹೋಗುವ ನದಿ ನೀರು ಸಮರ್ಪಕವಾಗಿ ಬಳಸಲು ಯೋಜನೆ ಅನುಷ್ಠಾನಕ್ಕೆ ತರಲಾಗುವುದೆಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಮಾಯಕರ ಕೊಲೆ ನಡೆದಿದೆ. ಹತ್ಯೆ ಸಂದರ್ಭದಲ್ಲಿಯೂ ಮುಖ್ಯಮಂತ್ರಿ ತಾರತಮ್ಯದಿಂದ ನಡೆದುಕೊಂಡಿ ದ್ದಾರೆ. ದೇಶಕ್ಕಾಗಿ ಬಲಿದಾನಗೈದ ಕೊಡಗಿನ ಯೋಧನ ಮನೆಗೆ ಸಿಎಂ ಭೇಟಿ ಮಾಡಲಿಲ್ಲ. ಆತ ಮುಸ್ಲಿಂ ಎಂಬ ಕಾರಣಕ್ಕಾಗಿ ಸಿಎಂ ಭೇಟಿ ನೀಡಿಲಿಲ್ಲ ಎಂದು ಟೀಕಿಸಿದರು.
ಆರ್‌ಎಸ್‌ಎಸ್‌ನಲ್ಲಿದ್ದ ಪ್ರಾಮಾಣಿಕರು, ದೇಶಭಕ್ತರು ಮನೆ ಸೇರಿಕೊಂಡಿದ್ದಾರೆ. ಬಿಜೆಪಿ ಕಟ್ಟಿ ಬೆಳೆಸಿದ ಎ.ಕೆ. ಸುಬ್ಬಯ್ಯ ಸತ್ಯ ಹೇಳಿದ್ದಕ್ಕೆ ಹಿಂದು ವಿರೋಧಿ ಹಣೆಪಟ್ಟಿ ಕಟ್ಟಿ ಪಕ್ಷದಿಂದ ಹೊರಹಾಕಿದ್ದರು. ಚುನಾವಣೆ ಮುಗಿಯುವರೆಗೂ ಹಿಂದು ಎನ್ನುತ್ತಾರೆ. ಅಧಿಕಾರಕ್ಕೆ ಬಂದ ಮೇಲೆ ಮುಂದು ಎಂದು ಹೋಗುತ್ತಾರೆ. ಬಿಜೆಪಿಯಲ್ಲಿ ಈಗ ಯಾರೂ ಒರಿಜಿನಲ್ ಇಲ್ಲ. ಕಾಂಗ್ರೆಸ್, ಜೆಡಿಎಸ್‌ನಿಂದ ಹೋದವರು ಸ್ಥಾನಮಾನ ಪಡೆದಿದ್ದಾರೆಂದರು.
ಬಿಜೆಪಿ, ಕಾಂಗ್ರೆಸ್ ನಾಯಕರು ಸಾವಿರಾರು ಕೋಟಿ ರೂಪಾಯಿ ಹಣವನ್ನು ದಿಲ್ಲಿ ನಾಯಕರಿಗೆ ತಲುಪಿಸುತ್ತಿದ್ದಾರೆ. ಇದನ್ನೇ ಸಚಿವರೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಒಳ್ಳೆಯ ಆಡಳಿತ ನೀಡಿ ದ್ದಾರೆ. ಇವರ ಮೇಲೆ ಒಂದೇ ಒಂದು ಅಪವಾದ ಬರಲಿಲ್ಲ. ಈಗಿನ ಸರ್ಕಾರದಲ್ಲಿರುವ ಸಚಿವರು ಜಾಮೀನಿನ ಮೇಲೆ ಇದ್ದಾರೆ. ಅನೈತಿಕ ಚಟುವಟಿಕೆ ನಡೆಸಿದವರೂ ಕೂಡ ಸಚಿವರಾಗಿದ್ದಾರೆಂದು ಟೀಕಿಸಿದರು.
೨೦೧೮ ರ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಕೊಡಗಿನಲ್ಲಿ ಕಟ್ಟಿರುವ ಮನೆಯ ಮಾದರಿಯಲ್ಲಿ ರಾಜ್ಯಾದ್ಯಂತ ಸಂತ್ರಸ್ತರಿಗೆ ಮನೆ ಕಟ್ಟಿಕೊಡಲಾಗು ವುದು. ಕುಮಾರಸ್ವಾಮಿ ಕಟ್ಟಿದ ಕೊಡಗು ಮಾದರಿ ಮನೆ ಎಲ್ಲೆಡೆ ಮಾಡಲಾಗುವುದು. ಕುಮಾರಸ್ವಾಮಿ ಎಂದಿಗೂ ಕೊಟ್ಟ ಮಾತು ತಪ್ಪುವು ದಿಲ್ಲ. ತಮ್ಮ ಆಡಳಿತಾವಧಿಯಲ್ಲಿ ೨೫ ಸಾವಿರ ರೈತರ ಸಾಲ ಮನ್ನಾ ಮಾಡಿದ್ದು, ಈ ಪೈಕಿ ವೀರಶೈವ- ಲಿಂಗಾಯಿತ ರೈತರಿಗೆ ಹೆಚ್ಚಿನ ಪ್ರಯೋಜನವಾಗಿದೆ ಎಂದರು.
ಕೊಡಗಿನ ಎರಡು ವಿಧಾನಸಭಾ ಕ್ಷೇತ್ರದಲ್ಲಿಯೂ ಜೆಡಿಎಸ್ ಗೆಲುವು ಸಾಧಿಸಲಿದೆ. ಗುರು-ಹಿರಿಯರು ಶುಭ ಮುಹೂರ್ತದಲ್ಲಿ ಅಭ್ಯರ್ಥಿ ಘೋಷಿಸಲಿದ್ದಾರೆ. ಸರ್ವ ಸಮ್ಮತ್ತಿ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ. ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಹಾಗೂ ಒಂದಾಗಿ ಹೋಗು ವ ಭರವಸೆಯನ್ನು ಕೊಡಗಿನ ನಾಯಕರು ನೀಡಿದ್ದಾರೆಂದರು.
ಗೋಷ್ಠಿಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಸಂಭವನೀಯ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಸುರೇಶ್, ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಎಲ್. ವಿಶ್ವ, ಕುಶಾಲನಗರ ನಗರ ಜೆಡಿಎಸ್ ಅಧ್ಯಕ್ಷ ಎಚ್.ಡಿ. ಚಂದ್ರು ಮತ್ತಿತರರು ಇದ್ದರು.
ಮಾನಕ್ಕಾಗಿ ಎಂಎಲ್ಸಿ ಸ್ಥಾನ ಬಿಟ್ಟೆ
೨೧ ಎಂಎಲ್ಸಿ ಪೈಕಿ ೧೯ ಎಂಎಲ್ಸಿಗಳು ನನ್ನನ್ನು ವಿಧಾನ ಪರಿಷತ್ ಪ್ರತಿಪಕ್ಷ ನಾಯಕರನ್ನಾಗಿ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದರು. ಆದರೆ, ಕಾಂಗ್ರೆಸ್ ನಾಯಕರು ನನಗೆ ಆ ಸ್ಥಾನ ನೀಡಲಿಲ್ಲ. ಆ ಕಾರಣಕ್ಕಾಗಿ ೪ ವರ್ಷ ಅವಧಿ ಇರುವ ಸಂದರ್ಭದಲ್ಲಿಯೇ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ, ಮಾನ ಇರುವ ಜೆಡಿಎಸ್‌ಗೆ ಬಂದಿದ್ದೇನೆಂದು ಸಿ.ಎಂ. ಇಬ್ರಾಹಿಂ ಹೇಳಿದರು.
ವಿಧಾನ ಪರಿಷತ್, ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿಯೂ ರಾಜ್ಯಾಧ್ಯಕ್ಷನಾಗಿ ನಾನು ಸ್ಥಾನ ಕೇಳಿಲಿಲ್ಲ. ಇತರರಿಗೆ ಈ ಸ್ಥಾನ ಸಿಗುವಂತೆ ಮಾಡಿದ್ದೇವೆ. ನನಗೆ ಅಧಿಕಾರಕ್ಕಿಂತ ಮಾನ್ಯ ಮುಖ್ಯ ಎಂದರು.
ಎಚ್.ಡಿ. ಕುಮಾರಸ್ವಾಮಿ ಸರ್ಕಾರ ತೆಗೆದುಹಾಕಲು ತಮ್ಮ ಆಪ್ತ ಕಾಂಗ್ರೆಸ್ ಶಾಸಕರನ್ನು ಸಿದ್ದರಾಮಯ್ಯ ಬಿಜೆಪಿಗೆ ಕಳುಹಿಸಿಕೊಟ್ಟಿದ್ದರು. ಈ ಪಾಪದ ಫಲವನ್ನು ಈಗ ಬಿಜೆಪಿ- ಕಾಂಗ್ರೆಸ್ ಅನುಭವಿಸುತ್ತಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಎಲ್ಲಾ ಲಕ್ಷ್ಮಿಗಳು ಹೋಗಿ ದರಿದ್ರ ಲಕ್ಷ್ಮಿ ಮಾತ್ರ ಉಳಿದುಕೊಂಡಿದೆ ಎಂದು ವ್ಯಂಗ್ಯವಾಡಿದರು.