

ಎನ್.ಆರ್.ಪುರ: ತಾಲೂಕಿನ ಆರು ಗ್ರಾಮ ಪಂಚಾಯಿತಿಗಳಿಗೆ ಕ್ಷಯಮುಕ್ತ ಗ್ರಾಮ ಪಂಚಾಯಿತಿ ಪ್ರಶಸ್ತಿ ಲಭಿಸಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ನರಸಿಂಹಮೂರ್ತಿ ತಿಳಿಸಿದ್ದಾರೆ.
ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಕ್ಷಯಮುಕ್ತ ಗ್ರಾಮ ಪಂಚಾಯಿತಿ ಅಭಿಯಾನ ನಡೆಸಲಾಗಿದ್ದು, ಇದರಲ್ಲಿ ಆರು ಗ್ರಾಪಂಗಳು ಕ್ಷಯಮುಕ್ತವೆಂದು ಆಯ್ಕೆಯಾಗಿವೆ. ಸರ್ಕಾರ ನಿಗದಿಪಡಿಸಿದ ಸೂಚ್ಯಂಕದ ಪ್ರಕಾರ ಕ್ಷಯ ನಿಯಂತ್ರಿಸುವಲ್ಲಿ ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬನ್ನೂರು ಗ್ರಾಪಂಗೆ ಕಂಚಿನ ಪ್ರತಿಮೆ, ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಆಡುವಳ್ಳಿ ಗ್ರಾಪಂಗೆ ಬೆಳ್ಳಿಯ ಪ್ರತಿಮೆ, ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕಡಹಿನಬೈಲು ಗ್ರಾಪಂಗೆ ಬೆಳ್ಳಿ ಪ್ರತಿಮೆ, ಸೀತೂರು ಗ್ರಾಪಂಗೆ ಕಂಚಿನ ಪ್ರತಿಮೆ, ಎನ್.ಆರ್.ಪುರ ಸಾರ್ವಜನಿಕ ಆಸ್ಪತ್ರೆ ವ್ಯಾಪ್ತಿಯ ಹೊನ್ನೇಕೊಡಿಗೆ ಗ್ರಾಪಂಗೆ ಬೆಳ್ಳಿ ಪ್ರತಿಮೆ ಹಾಗೂ ಮಾಗುಂಡಿ ಗ್ರಾಪಂಗೆ ಬೆಳ್ಳಿ ಗಾಂಧೀಜಿ ಪ್ರತಿಮೆ ಲಭಿಸಿದೆ. ಚಿಕ್ಕಮಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಸೋಮವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅಶ್ವತ್ಥ್‌ಬಾಬು ಅವರು ಆರೂ ಗ್ರಾಪಂಗಳ ಅಧ್ಯಕ್ಷರು, ಪಿಡಿಒ ಹಾಗೂ ವೈದ್ಯಾಧಿಕಾರಿಗಳಿಗೆ ಗಾಂಧೀಜಿ ಪ್ರತಿಮೆ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು ಎಂದು ಮಾಹಿತಿ ನೀಡಿದ್ದಾರೆ. ಕ್ಷಯಮುಕ್ತ ಗ್ರಾಪಂ ಪ್ರಶಸ್ತಿ ಲಭಿಸಲು ಕ್ಷೇತ್ರಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒಗಳು, ತಾಲೂಕು ಕ್ಷಯ ಘಟಕದ ಮೇಲ್ವಿಚಾರಕರು ಹಾಗೂ ಸಾರ್ವಜನಿಕರ ಸಹಕಾರದಿಂದ ಈ ಸಾಧನೆ ಮಾಡಲಾಗಿದೆ. ಕ್ಷಯಮುಕ್ತ ತಾಲೂಕನ್ನಾಗಿ ನಿರ್ಮಾಣ ಮಾಡಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.