

ಕುಶಾಲನಗರ: ಭಕ್ತಿಯಿಂದ ಆರಾಧಿಸುವವರ ಇಷ್ಟಾರ್ಥಗಳನ್ನು ಈಡೇರಿಸುವ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ಕುಶಾಲನಗರದಲ್ಲಿ ನೆಲೆಸಿದ್ದು, ಭಕ್ತರ ಪಾಲಿನ ಆರಾಧ್ಯ ದೈವವಾಗಿದ್ದೇನೆ.
ಇಲ್ಲಿನ ಹಳೆಯ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ದೇವಸ್ಥಾನ ಇದ್ದು, ಹಲವು ಅಚ್ಚರಿಗಳಿಗೆ ಹೆಸರಾಗಿದೆ. ಸುಮಾರು 60 ವರ್ಷಗಳ ಹಿಂದೆ ಇಲ್ಲಿನ ನಿವಾಸಿ ದೇವರಾಜೇಗೌಡ ಎನ್ನುವವರು ಅಲ್ಲಿದ್ದ ತಾರೆ ಮರವನ್ನು ಕಡಿದು ತಮ್ಮ ಮನೆಗೆ ಸೌದೆಗಾಗಿ ತೆಗೆದುಕೊಂಡು ಹೋಗಿದ್ದರು. ಸಂಜೆಯಾಗುತ್ತಲೇ ಹಾವು ಆ ಮನೆಯೊಳಗೆ ಬಂದು ದೇವರಾಜೇಗೌಡ ಅವರ ಪತ್ನಿಯನ್ನು ಕಚ್ಚಲು ಮುಂದಾದಾಗ ಅವರು ಸಾಕಿದ್ದ ಬೆಕ್ಕು ಹಾವು ಕಚ್ಚುವುದನ್ನು ತಡೆದು ಆಕೆಯ ಪ್ರಾಣ ಉಳಿಸಿದೆ ಎನ್ನಲಾಗಿದೆ.
ಆದರೂ ಹಾವು ಮಹಿಳೆಯ ಬೆರಳನ್ನು ಕಚ್ಚಿ ತನ್ನ ರೋಷ ತೀರಿಸಿಕೊಂಡಿದೆ. ವೈದ್ಯರ ಸಲಹೆ ಮೇರೆಗೆ ಹಾವು ಕಚ್ಚಿದ ಮಹಿಳೆಯ ಬೆರಳನ್ನು ಕತ್ತರಿಸಲಾಗಿತ್ತು. ನಂತರ ದೇವರಾಜೇಗೌಡ ಮತ್ತು ಅವರ ಪತ್ನಿ ತಾರೆ ಮರ ಇದ್ದ ಜಾಗವನ್ನು ಪರಿಶೀಲಿಸಿದಾಗ ಹಾವಿನ ಆಕಾರದಲ್ಲಿ ಇರುವ ಕಲ್ಲು ಕಣ್ಣಿಗೆ ಬಿದ್ದಿದೆ. ಪ್ರತಿದಿನ ಆ ಮಹಿಳೆ ಹಾಲು ಎರೆದು ಪೂಜಿಸಲು ಆರಂಭಿಸಿದರು. ತದನಂತರ ಆ ಇಡೀ ಕುಟುಂಬ ಸರ್ವ ರೀತಿಯಲ್ಲೂ ಯಶಸ್ಸು ಕಾಣುತ್ತ ಬಂದಿದೆ ಎಂದು ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ಎಂ.ಎಸ್.ಮೊಗ್ಗಣ್ಣ ಹೇಳುತ್ತಾರೆ.
ರಸ್ತೆಯಿಂದ ಅಂದಾಜು 15 ಅಡಿ ಎತ್ತರದಲ್ಲಿ ಶ್ರೀಉದ್ಭವ ಸುಬ್ರಹ್ಮಣ್ಯಸ್ವಾಮಿ ದೇವರಿದ್ದು, ಶನಿ, ಈಶ್ವರ ಲಿಂಗ, ಗಣಪತಿ ಆಕಾರಗಳು ಇಲ್ಲಿ ಮೂಡಿದೆ. ಶನಿ ಇರುವಿಕೆಯ ಸಂಕೇತವಾಗಿ ಅದೇ ಜಾಗದಲ್ಲಿ ತಾರೆ ಮರ ಬೆಳೆಯುತ್ತಿದೆ. 7 ಹೆಡೆ ಎತ್ತಿರುವ ಆಕಾರದಲ್ಲಿ ಇರುವ ಕಲ್ಲಿನಿಂದ ಇಲ್ಲಿ ಹಲವು ಅಚ್ಚರಿಗಳು ನಡೆದಿದ್ದು, ಈಗಲೂ ನಡೆಯುತ್ತಿವೆ. 1992ರಲ್ಲಿ ಶಂಕರಮೇಸ್ತ್ರಿ ಎನ್ನುವವರಿಗೆ ಕನಸಿನಲ್ಲಿ ದೇವರು ಪ್ರತ್ಯಕ್ಷವಾಗಿ ದೇವಸ್ಥಾನ ನಿರ್ಮಿಸುವಂತೆ ತಿಳಿಸಿತು. ಆ ಬಳಿಕ ಒಂದು ವರ್ಷದೊಳಗೆ ದೇವಸ್ಥಾನ ನಿರ್ಮಾಣ ಕಾರ್ಯ ಮುಗಿಯಿತು. ಅಂದಿನಿಂದ ಇಲ್ಲಿಗೆ ಬರುವ ಭಕ್ತರು ಸಂಖ್ಯೆ ಹೆಚ್ಚಾಯಿತು.
ಷಷ್ಠಿ ಹಬ್ಬ ಜೋರು: ಷಷ್ಠಿ ಹಬ್ಬದ ದಿನದಂದು ಸುಮಾರು 50 ಸಾವಿರ ಭಕ್ತರು ದೇವರ ದರ್ಶನ ಪಡೆಯುತ್ತಾರೆ. ಅಂದು ಮಧ್ಯಾಹ್ನ ಅನ್ನಸಂತರ್ಪಣೆಯೂ ನಡೆಯುತ್ತದೆ. ಇದಲ್ಲದೆ ನಾಗರಪಂಚಮಿ ವಿಶೇಷ ದಿನದಂದು ಸಾವಿರಾರು ಭಕ್ತರು ಬಂದು ಹುತ್ತಕ್ಕೆ ತೆನೆ ಎರೆಯುವುದು ಸಾಮಾನ್ಯ. ಆ ಸಂದರ್ಭದಲ್ಲಿ ಕೆಲ ಭಕ್ತರಿಗೆ ಇಲ್ಲಿ ಹಾವು ಕಂಡಿರುವುದು ಜನರ ಭಕ್ತಿ ಹೆಚ್ಚಾಗಲು ಕಾರಣವಾಗಿದೆ ಎಂದು ಸಮಿತಿ ಅಧ್ಯಕ್ಷ ಚಿಕ್ಕೇಗೌಡ ವಿಜಯವಾಣಿಗೆ ತಿಳಿಸಿದರು.
ನಾಗ ಕುರ, ಕಜ್ಜಿಗೆ ಇಲ್ಲಿನ ಹುತ್ತದ ಮಣ್ಣು ದಿವ್ಯ ಔಷಧವಾಗಿದೆ. ನಾಗ ದೇವರಿಗೆ ಸಂಬಂಧಿಸಿದ ಯಾವುದೇ ರೀತಿಯ ದೋಷಗಳಿದ್ದರೂ ಅದಕ್ಕೆ ಇಲ್ಲಿ ಪರಿಹಾರ ಸಿಗುತ್ತದೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ ಪೂಜೆ ಮಾಡಿಸಲು ಸಾಧ್ಯವಾಗದವರು ಇಲ್ಲಿಗೆ ಬಂದು ಪೂಜೆ ಮಾಡಿಸಿ ನಿವಾರಣೆ ಕಂಡಿರುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.
ತಿಂಗಳ ಷಷ್ಠಿ, ಪ್ರತಿ ಮಂಗಳವಾರ ಮತ್ತು ನಾಗರಪಂಚಮಿ ದಿನದಂದು ವಿಶೇಷ ಪೂಜೆ, ಅಭಿಷೇಕ ನೆರವೇರುತ್ತದೆ. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಶ್ಲೇಷ ಬಲಿ ಪೂಜೆಗೆ ಬರುತ್ತಾರೆ. ಅದಕ್ಕಾಗಿಯೇ ವಿಶೇಷ ಮಂಟಪ ನಿರ್ಮಿಸಿ ಅನುಕೂಲ ಮಾಡಿಕೊಡಲಾಗುತ್ತದೆ. ಗುಜ ದೋಷ ನಿವಾರಣೆ, ಕಜ್ಜಿ ತುರಿ ಸೇರಿದಂತೆ ಹಲವು ರೋಗಗಳಿಂದ ಮುಕ್ತಿ ಹೊಂದಲು ಹರಕೆ ತೀರಿಸುವ ವಾಡಿಕೆ ಇಂದಿಗೂ ಇದೆ.
ಷಷ್ಠಿ ಹಬ್ಬದ ಹಿಂದಿನ ದಿನ ಅದ್ದೂರಿ ಉತ್ಸವ ನಡೆಯಲಿದೆ. ಅಂದು ಇಡೀ ದಿನ ಹಲವು ರೀತಿಯ ವಿಶೇಷ ಪೂಜಾ ಕೈಕಂರ್ಯ ನೆರವೇರಲಿದೆ. ಭಕ್ತರ ಕೋರಿಕೆಯಂತೆ ಅಭಿಷೇಕ ಮತ್ತು ಪೂಜೆಗಳನ್ನು ನೆರವೇರಿಸಲಾಗುತ್ತದೆ. ಸಂಜೆ ಕುಶಾಲನಗರ, ಮುಳ್ಳುಸೋಗೆ ಮತ್ತು ಜನತಾ ಕಾಲನಿಯ ಪ್ರಮುಖ ಬೀದಿಗಳಲ್ಲಿ ದೇವರ ಉತ್ಸವದ ಮೆರವಣಿಗೆ ನಡೆಯಲಿದೆ.
ಕೆಲವೊಮ್ಮೆ ಹಾವು ಇಲ್ಲಿ ಬಂದು ಹೋದಾಗ ಅದರ ವಾಸನೆ ಗರ್ಭಗುಡಿಯಲ್ಲಿ ಆಗಾಗ್ಗೆ ಭಾಸವಾಗುತ್ತದೆ. ಭಕ್ತಿಯಿಂದ ಬೇಡುವ ಭಕ್ತರಿಗೆ ಈವರೆಗೂ ನಿರಾಸೆಯಾಗಿಲ್ಲ. ಮದುವೆ, ಮಕ್ಕಳು, ವಿದ್ಯೆಗೆ ಸಂಬಂಧಿಸಿದಂತೆ ಹೆಚ್ಚು ಜನರು ಇಲ್ಲಿಗೆ ಬರುತ್ತಾರೆ. ದೇವರೇ ಇಲ್ಲಿ ಉದ್ಭವವಾಗಿರುವುದರಿಂದ ಈ ದೇವಸ್ಥಾನ ಭವಿಷ್ಯದಲ್ಲಿ ಪವಾಡ ಕ್ಷೇತ್ರವಾಗಿ ಅಭಿವೃದ್ಧಿ ಹೊಂದಲಿದೆ.
ಕೆ.ಎಲ್.ಕೃಷ್ಣಮೂರ್ತಿ ಪ್ರಧಾನ ಅರ್ಚಕ, ಸುಬ್ರಹ್ಮಣ್ಯ ದೇವಸ್ಥಾನ, ಹೌಸಿಂಗ್ ಬೋರ್ಡ್, ಕುಶಾಲನಗರ.
ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಬಹಳ ಆಚ್ಚರಿ ನಡೆಯುತ್ತಿದೆ. ಭಕ್ತರ ನಂಬಿಕೆಗೆ ಮೋಸವಾಗದ ರೀತಿಯಲ್ಲಿ ಎಲ್ಲ ಕಾರ್ಯಗಳು ಆಗುತ್ತಿದೆ. ಹುತ್ತದ ಮಣ್ಣು ಔಷಧ ರೀತಿಯಲ್ಲಿ ಕೆಲಸ ಮಾಡುವುದೇ ಇಲ್ಲಿನ ಪ್ರಮುಖ ಪವಾಡ.
ಚಿಕ್ಕೇಗೌಡ ಅಧ್ಯಕ್ಷ, ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಸಮಿತಿ, ಕುಶಾಲನಗರ.
ಮದುವೆ, ಮಕ್ಕಳು, ವಿದ್ಯೆ, ನಾಗರದೋಷ ನಿವಾರಣೆಗಾಗಿ ಭಕ್ತರು ಇಲ್ಲಿಗೆ ಬರುತ್ತಿದ್ದಾರೆ. ಇಲ್ಲಿ ಎಲ್ಲ ರೀತಿಯ ಪೂಜಾ ಕೈಂಕರ್ಯಗಳು ಶಾಸ್ತ್ರೋಕ್ತವಾಗಿ ನಡೆಯಲಿದೆ. ಅದರಿಂದ ದೇವರ ಅನುಗ್ರಹ ದೊರೆಯುತ್ತದೆ ಎನ್ನುವ ವಿಶ್ವಾಸ ಭಕ್ತರದು.
ಹನುಮರಾಜು ಖಜಾಂಚಿ, ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಸಮಿತಿ, ಕುಶಾಲನಗರ