

ಚಿತ್ರದುರ್ಗ: ರಾಘವೇಂದ್ರ ಸ್ವಾಮಿಯ 353ನೇ ಆರಾಧನಾ ಪಂಚರಾತ್ರೋತ್ಸವವೂ ಶುಕ್ರವಾರ ಸುಜ್ಞಾನೇಂದ್ರ ತೀರ್ಥರ ಆರಾಧನೆ, ಪವಮಾನ ಹೋಮ, ಸರ್ವ ಸಮರ್ಪಣೋತ್ಸವ ಪೂಜಾ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು.
ನಂಜನಗೂಡು ರಾಘವೇಂದ್ರ ಸ್ವಾಮಿಯ ಚಿತ್ರದುರ್ಗದ ಶಾಖಾ ಮಠದಲ್ಲಿ ಗುರುಸಾರ್ವಭೌಮರ ಮೂರ್ತಿಗೆ ವಿವಿಧ ವರ್ಣದ ಸೇವಂತಿ, ಮಲ್ಲಿಗೆ, ಕನಕಾಂಬರ, ಕಣಗಲೆ, ತುಳಸಿ ಸೇರಿ ಹೂವಿನ ಹಾರದಿಂದ ವಿಶೇಷ ಅಲಂಕಾರ ಸೇವೆ ನೆರವೇರಿತು.
ಸ್ವಾಮಿಯ ಸಾವಿರಾರು ಭಕ್ತರು ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಶ್ರದ್ಧಾ-ಭಕ್ತಿಯಿಂದ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿಕೊಂಡರು. ಮಹಾಮಂಗಳಾರತಿ ಪಡೆದು ಪ್ರಸಾದ ಸ್ವೀಕರಿಸಿದರು.