ಆರಂಭಿಕ ಹಂತದಿಂದಲೇ ಮಕ್ಕಳಿಗೆ ಸಿಗಲಿ ಸಂಸ್ಕಾರಯುತ ಶಿಕ್ಷಣ

17-Bhalki-
ಭಾಲ್ಕಿಯಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಸತ್ಯಸಾಯಿ ಪಬ್ಲಿಕ್ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಂಸದ ಸಾಗರ ಖಂಡ್ರೆ, ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ, ಬಿಇಒ ಚನ್ನಪ್ಪ ಹಳ್ಳದ, ಚಂದ್ರಶೇಖರ ಎಮ್ಮೆ, ಜ್ಯೋತಿ ಎಮ್ಮೆ ಇತರರಿದ್ದರು.
Published on

ಭಾಲ್ಕಿ: ಇಂದಿನ ಮಕ್ಕಳೇ ದೇಶದ ನಾಳಿನ ಪ್ರಜೆಗಳು. ಅವರಿಗೆ ಪೂರ್ವ ಪ್ರಾಥಮಿಕ ಹಂತದಿಂದಲೇ ಸಂಸ್ಕಾರಯುತ ಶಿಕ್ಷಣ ದೊರೆತರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಸಂಸದ ಸಾಗರ ಖಂಡ್ರೆ ಹೇಳಿದರು.

ಪಟ್ಟಣದ ಶ್ರೀ ಸತ್ಯಸಾಯಿ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ೨೨ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಂಯಮ, ಸಂಸ್ಕಾರದಂತಹ ಉತ್ತಮ ಮೌಲ್ಯಗಳನ್ನು ರೂಢಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು ಎಂದು ಕಿವಿಮಾತು ಹೇಳಿದರು.

ಹಿಂದುಳಿದ ಹಣೆಪಟ್ಟಿ ಹೊತ್ತಿದ್ದ ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಸರ್ಕಾರ ಜತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಕ್ಷೇತ್ರದ ವಿಕಾಸಕ್ಕೆ ಕೈಜೋಡಿಸಿದ್ದರಿಂದ ಸರ್ವಾಂಗೀಣ ಪ್ರಗತಿ ಕಾಣುತ್ತಿರುವುದು ಒಳ್ಳೆಯ ಬೆಳವಣಿಗೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಭಾಲ್ಕಿ ತಾಲೂಕಿನಲ್ಲೂ ಅನೇಕ ಸಂಸ್ಥೆಗಳು ಮಕ್ಕಳಿಗೆ ಪರಿಣಾಮಕಾರಿ ಶಿಕ್ಷಣ ನೀಡುತ್ತಿರುವುದರಿಂದ ಅಕ್ಷರ ಕ್ಷೇತ್ರದಲ್ಲಿ ಈ ಭಾಗದ ಅನೇಕ ಪ್ರತಿಭಾವಂತ ಮಕ್ಕಳು ಉನ್ನತ ಸಾಧನೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜ್ಞಾನ-ತಂತ್ರಜ್ಞಾನ ಯುಗ ಇದಾಗಿದ್ದರಿಂದ ಮಕ್ಕಳು ಪಠ್ಯ ಶಿಕ್ಷಣ ಜತೆಗೆ ವೈಜ್ಞಾನಿಕ, ವೈಚಾರಿಕ ಜತೆಗೆ ವ್ಯವಹಾರಿಕ ಜ್ಞಾನ ಬೆಳೆಸಿಕೊಳ್ಳುವತ್ತಲೂ ಗಮನಹರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ತರಗತಿ ಕೋಣೆಗಳಲ್ಲಿ ಶಿಕ್ಷಕರು ಮತ್ತು ಮನೆಗಳಲ್ಲಿ ಪಾಲಕರು ಸಹ ಮುತುವರ್ಜಿ ವಹಿಸಿದರೆ ಮಕ್ಕಳಿಗೆ ಎಲ್ಲ ತೆರನಾದ ವಿಷಯಗಳನ್ನು ಅರಿತುಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದರು.

ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಹೊಂದುವಲ್ಲಿ ಪಾಲಕರ ಪಾತ್ರ ಬಹುಮುಖ್ಯ ಆಗಿರುತ್ತದೆ. ಮಕ್ಕಳನ್ನು ಶಾಲಾ-ಕಾಲೇಜುಗಳಿಗೆ ಕಳಿಸಿದ ಮಾತ್ರಕ್ಕೆ ನಮ್ಮ ಜವಾಬ್ದಾರಿ ಮುಗಿಯಿತು ಎಂದುಕೊಳ್ಳುವಂತಿಲ್ಲ. ಮಕ್ಕಳ ಪ್ರತಿ ಚಟುವಟಿಕೆ ಮೇಲೆ ನಿಗಾ ಇರಿಸಿದರೆ ಸರಿದಾರಿಯಲ್ಲಿ ಸಾಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಂದ್ರಶೇಖರ ಎಮ್ಮೆ ಮಾತನಾಡಿ, ಪರಿಣತ ಶಿಕ್ಷಕರು ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ಪಾಠ ಬೋಧನೆ ಮಾಡುತ್ತಿದ್ದಾರೆ. ಯಾವುದೇ ವಿಷಯದ ಬಗ್ಗೆ ಗೊಂದಲವಿದ್ದರೆ ತಕ್ಷಣ ಮಕ್ಕಳಿಗೆ ಶಿಕ್ಷಕರು ಪರಿಹರಿಸುತ್ತಾರೆ. ಅಂತಲೇ ಶಾಲೆ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪ ಹಳ್ಳದ, ಶಿಕ್ಷಣ ಸಂಯೋಜಕ ಮಲ್ಲಿಕಾರ್ಜುನ ಕನ್ನಾಳೆ, ಸಹದೇವ, ಡಾ.ಮಲ್ಲಿಕಾರ್ಜುನ ಎಮ್ಮೆ, ಜ್ಯೋತಿ ಎಮ್ಮೆ, ನಿರ್ಮಲಾ ತಿವಾರಿ, ಪತ್ರಿಕಾ ವಿತರಕ ರಾಜಗುರು ಮಹಾಗಾಂವೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net