

ಕೊಳ್ಳೇಗಾಲ: ಸಿಕಲ್ ಸೆಲ್ ಅನುವಂಶಿಕ ಕಾಯಿಲೆಯಾಗಿದ್ದು, ಇದನ್ನು ತಡೆಗಟ್ಟಲು ಆರಂಭಿಕ ಪತ್ತೆ ಮತ್ತು ಪರಿಣಾಮಕಾರಿ ನಿರ್ವಹಣೆಯಲ್ಲಿ ಸಮುದಾಯ ಮತ್ತು ಕುಟುಂಬದ ಬೆಂಬಲವೂ ಅತ್ಯಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಡಾ.ಚಿದಂಬರ ತಿಳಿಸಿದರು.
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಸೆಂಟರ್ ಫಾರ್ ಟ್ರೈನಿಂಗ್, ರಿಸರ್ಚ್ ಅಂಡ್ ಇನ್ನೋವೇಷನ್ ಇನ್ ಟ್ರೈಬಲ್ ಹೆಲ್ತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆದಿವಾಸಿ ಹಾಗೂ ಇತರೆ ಸಮುದಾಯದ ಸಿಕಲ್ ಸೆಲ್/ಕುಡಗೋಲು ಕೋಶ ರೋಗಿಗಳಿಗೆ ಶುಕ್ರವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ಕುಡಗೋಲು ಕೋಶ ರೋಗದಿಂದ ಬಳಲುತ್ತಿರುವ ಜನರಿಗೆ ಅಂಗವೈಕಲ್ಯ ಪ್ರಮಾಣಪತ್ರಗಳನ್ನು ನೀಡಿದ ಮೊದಲ ಜಿಲ್ಲೆ ಚಾಮರಾಜನಗರ. ಇದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ. ರಾಷ್ಟ್ರೀಯ ಸಿಕಲ್ ಸೆಲ್ ನಿರ್ಮೂಲನಾ ಅಭಿಯಾನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ನಮ್ಮ ಬದ್ಧತೆಯನ್ನು ತೋರಿಸುತ್ತದೆ ಎಂದರು.
ಶಿಬಿರದಲ್ಲಿ 45 ರೋಗಿಗಳು ಭಾಗವಹಿಸಿದರು. 35 ಜನರಿಗೆ ವಿಶಿಷ್ಟ ಅಂಗವೈಕಲ್ಯ ಐಡಿಕಾರ್ಡ್‌ಗಾಗಿ ಪ್ರಮಾಣೀಕರಿಸಲಾಯಿತು. ಕಾರ್ಯಕ್ರಮದ ಮುಖ್ಯಸ್ಥೆ ಡಾ.ದೀಪಾ ಭಟ್, ಅಭಿಯಾನದ ನೋಡಲ್ ಅಧಿಕಾರಿ ಡಾ.ರವಿಕುಮಾರ್, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ರಾಜಶೇಖರ್ ಹಾಗೂ ನರ್ಸಿಂಗ್ ಸಿಬ್ಬಂದಿ, ಲ್ಯಾಬ್ ಟೆಕ್ನಿಷಿಯನ್, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ವೈದ್ಯರು, ಮಕ್ಕಳ ತಜ್ಞರು, ವೈದ್ಯರು ಹಾಗೂ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಸಿಬ್ಬಂದಿ ಇದ್ದರು.