

ಬೀದರ್: ಕ್ಯಾನ್ಸರ್ ಪ್ರಾಣಾಂತಕವಿದೆ. ಆದರೆ ಆರಂಭದಲ್ಲೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ಸಂಪೂರ್ಣ ಗುಣ ಹೊಂದಲು ಸಾಧ್ಯ ಎಂದು ಹೈದರಾಬಾದ್ ಕೇರ್ ಆಸ್ಪತ್ರೆ ಹಿರಿಯ ಕ್ಯಾನ್ಸರ್ (ಅಂಕಾಲಾಜಿಸ್ಟ್) ಸರ್ಜನ್ ಬೀದರ್ ಮೂಲದ ಡಾ.ವಿಪಿನ್ ಗೋಯಲ್ ಹೇಳಿದರು.
ರೋಟರಿ ಕ್ಲಬ್ ಬೀದರ್ ನ್ಯೂ ಸೆಂಚ್ಯೂರಿ ಭಾನುವಾರ ಸಂಜೆ ಐಎಂಎ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ಅರಿವು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಕ್ಯಾನ್ಸರ್ ವಿಶ್ವಕ್ಕೆ ಮಹಾ ಪಿಡುಗಾಗಿ ಕಾಡುತ್ತಿದೆ. ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಗಳ ಪ್ರಮಾಣ ಗಣನೀಯ ಹೆಚ್ಚುತ್ತಿರುವುದು ಆತಂಕಕಾರಿ ವಿಷಯ. ಆಹಾರ ಮತ್ತು ಜೀವನ ಪದ್ಧತಿ ಬದಲಾವಣೆ, ಮಾಲಿನ್ಯ, ಮಾದಕ ವ್ಯಸನ ಸೇರಿ ನಾನಾ ಕಾರಣಗಳಿಂದಾಗಿ ಕ್ಯಾನ್ಸರ್ ಹೆಚ್ಚುತ್ತಿದೆ. ಸಾತ್ವಿಕ ಆಹಾರ ಸೇವನೆ ಜತೆಗೆ ಜೀವನ ಶೈಲಿ ಬದಲಿಸಿಕೊಂಡರೆ ಇದರಿಂದ ದೂರವಿರಬಹುದು ಎಂದರು.
ಕ್ಯಾನ್ಸರ್ ಪೀಡಿತರು ಸಾವು ಗೆಲ್ಲಬಹುದು. ಇದಕ್ಕೆ ಅನೇಕ ಉದಾಹರಣೆ ನಮ್ಮ ಮಧ್ಯೆ ಇವೆ. ಹಲವಾರು ಸಂದರ್ಭದಲ್ಲಿ ಕ್ಯಾನ್ಸರ್ ಲಕ್ಷಣ ನಮಗೆ ಬೇಗ ಅರಿವಿಗೆ ಬರುವುದಿಲ್ಲ. ಕೊನೇ ಹಂತದಲ್ಲಿ ಗೊತ್ತಾಗುವುದರೊಳಗೆ ಚಿಕಿತ್ಸೆ ನೀಡುವ ಅವಧಿ ಮೀರಿರುತ್ತದೆ. ಇಂಥ ಸಂದರ್ಭದಲ್ಲಿ ರೋಗಿಗಳು ಜೀವ ಉಳಿಸಿಕೊಳ್ಳುವುದು ಕಷ್ಟ. ಹೀಗಾಗಿ ದೇಹದಲ್ಲಿ ಏನೇ ವ್ಯತ್ಯಾಸ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಯಾವುದೇ ಕಡೆಗಣನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಹೇಳಿದರು.
ಎಲ್ಐಸಿ ಬೀದರ್ ಶಾಖೆ ವ್ಯವಸ್ಥಾಪಕ ರಮೇಶ ಗೈಬಾ ಮಾತನಾಡಿದರು. ರೋಟರಿ ನ್ಯೂ ಸೆಂಚ್ಯೂರಿ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿತಿನ್ ಕರ್ಪೂರ, ಡಾ.ನಾಗೇಶ್ ಪಾಟೀಲ್, ಸುಧೀಂದ್ರ ಸಿಂದೋಲ್, ಡಾ.ನಿತೀಶಕುಮಾರ ಬಿರಾದಾರ, ಜಯೇಶ ಪಟೇಲ್, ಆಕಾಶ ನಾಗಮಾರಪಳ್ಳಿ, ಪ್ರವೀಣ ಗೋಯಲ್ ಇದ್ದರು. ರಿತೇಶ ಸುಲೇಗಾಂವ್ ಸ್ವಾಗತಿಸಿದರು. ಸತೀಶ ಸ್ವಾಮಿ ವಂದಿಸಿದರು. ಫೇಸ್ ಬುಕ್ ಹಾಗೂ ಝೂಮ್ ಆ್ಯಪ್ ನಲ್ಲಿ ಅನೇಕರು ಕಾರ್ಯಕ್ರಮ ವೀಕ್ಷಿಸಿದರು.