

ಗೋಣಿಕೊಪ್ಪ: ದಕ್ಷಿಣ ಕೊಡಗಿನ ಭಾಗದ ಜನರ ಬಹುವರ್ಷದ ಹೋರಾಟದ ಫಲವಾಗಿ 2020ರ ನ.29 ರಂದು ಪೊನ್ನಂಪೇಟೆ ತಾಲೂಕು ಅಸ್ತಿತ್ವಕ್ಕೆ ಬಂದಿತಾದರೂ ಬಹುಮುಖ್ಯವಾಗಿ ಜನರಿಗೆ ಅಗತ್ಯವಿರುವ ತಾಲೂಕು ಆಸ್ಪತ್ರೆ ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ.
ವಿರಾಜಪೇಟೆ ತಾಲೂಕಿನ ಕೆಲವು ಗ್ರಾಮ ಮತ್ತು ಗೋಣಿಕೊಪ್ಪ ಒಳಗೊಂಡಂತೆ ನೂತನ ತಾಲೂಕು ರಚನೆಯಾಯಿತು. ಸುಮಾರು 25,000 ಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ನೂತನ ತಾಲೂಕು ಕೇರಳ ರಾಜ್ಯದೊಂದಿಗೆ ಗಡಿ ಹಂಚಿಕೊಳ್ಳುತ್ತದೆ. ಅತ್ತ ಕುಟ್ಟದಿಂದ ಇತ್ತ ಮೈಸೂರು ಗಡಿಭಾಗವಾದ ಆನೆಚೌಕೂರುವರೆಗೂ ವ್ಯಾಪ್ತಿ ಹೊಂದಿದೆ.
ತಾಲೂಕಿಗೆ ಇರಬೇಕಾದ ಮೂಲ ಸೌಕರ್ಯಗಳ ಪೈಕಿ ಕೆಲವು ಇಲ್ಲಿ ಆಗಿವೆ. ನ್ಯಾಯಾಲಯ, ತಾಲೂಕು ಕಚೇರಿ, ಪೊಲೀಸ್ ಠಾಣೆ ಇತ್ಯಾದಿ ಇದ್ದು, ಕೆಲವು ಕಾಮಗಾರಿಗಳು ಪೂರ್ಣಗೊಳ್ಳುವ ಹಂತ ತಲುಪಿವೆ.
ಪೊನ್ನಂಪೇಟೆ ತಾಲೂಕಿನಲ್ಲಿ ಹೆಚ್ಚು ಆದಿವಾಸಿ ಜನಾಂಗದವರು ವಾಸಿಸುತ್ತಿದ್ದು, ತಿತಿಮತಿ, ಬಾಳೆಲೆ, ನಾಗರಹೊಳೆ ವ್ಯಾಪ್ತಿಯಲ್ಲಿ ಹೆಚ್ಚಾಗಿ ಹಾಡಿಗಳು ಕಂಡು ಬರುತ್ತವೆ. ಇವರಿಗೆ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ದೂರದ ಊರಿನ ಆಸ್ಪತ್ರೆಗಳಿಗೆ ತೆರಳದೆ ಹಳ್ಳಿಮದ್ದನ್ನೇ ನೆಚ್ಚಿಕೊಂಡಿದ್ದಾರೆ. ಇದರಿಂದ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುತ್ತಿದೆ. ತಾಲೂಕಿನ ಅನಾರೋಗ್ಯ ಪೀಡಿತ ಜನ ಗೋಣಿಕೊಪ್ಪದ ಸರ್ಕಾರಿ ಆಸ್ಪತ್ರೆ ಅಥವಾ ಹೆಚ್ಚಿನ ಚಿಕಿತ್ಸೆಗೆ ದೂರದ ಮಡಿಕೇರಿ ಅಥವಾ ಮೈಸೂರಿಗೆ ತೆರಳಬೇಕಾದ ಪರಿಸ್ಥಿತಿ ಇದೆ.
ತಾಲೂಕು ರಚನೆಯಾದ ನಂತರ ಬೇಗೂರು ಎಂಬಲ್ಲಿ ಈಗಾಗಲೇ ಎರಡು ಎಕರೆ ಜಾಗವನ್ನು ಆಸ್ಪತ್ರೆಗಾಗಿ ಮೀಸಲಿಡಲಾಗಿದೆ. 45 ಕೋಟಿ ರೂ. ವೆಚ್ಚದ ಯೋಜನೆಯನ್ನೂ ಸಿದ್ಧಪಡಿಸಿ, ಕಾಮಗಾರಿಗೆ ಭೂಮಿಪೂಜೆಯನ್ನೂ ನೆರವೇರಿಸಲಾಗಿತ್ತು. ಆದರೆ ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ. ಉಳಿದಂತೆ ಎಲ್ಲ ಸರ್ಕಾರಿ ಕಚೇರಿಗಳು ಕಾರ್ಯಾರಂಭ ಮಾಡಿದ್ದರೂ ಆಸ್ಪತ್ರೆ ಮಾತ್ರ ಇನ್ನೂ ಅನುಮೋದನೆ ಹಂತದಲ್ಲಿಯೇ ಉಳಿದಿದೆ.
ಬಿಜೆಪಿ ಸರ್ಕಾರ ಅಧಿಕಾರದಿಂದ ಕೆಳಗಿಳಿದು ಇದೀಗ ಹೊಸದಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆಡಳಿತ ಪಕ್ಷದವರೇ ಈ ಕ್ಷೇತ್ರದ ಶಾಸಕರಾಗಿದ್ದಾರೆ. ಆದಷ್ಟು ಬೇಗ ಇಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಾಣವಾದರೆ ಈ ಭಾಗದ ಜನರಿಗೆ ಅನುಕೂಲ ಎಂಬುದು ಈ ಭಾಗದ ಜನರ ಆಶಯ.
ಪೊನ್ನಂಪೇಟೆ ತಾಲೂಕು ರಚನೆಯಾಗಿಯೂ ತಾಲೂಕು ಆಸ್ಪತ್ರೆ ಇನ್ನೂ ನಿರ್ಮಾಣವಾಗಿಲ್ಲ. ಇಲ್ಲಿ ಶೀಘ್ರ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣವಾಗಬೇಕು. ಜನರು ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ, ಮೈಸೂರು ಭಾಗಕ್ಕೆ ತೆರಳುತ್ತಿದ್ದಾರೆ. ಸಮಯ ಮತ್ತು ಹಣದ ಖರ್ಚು ಕೂಡ ಜಾಸ್ತಿ. ಹಾಗಾಗಿ ಸಂಬಂಧಪಟ್ಟವರು ತಾಲೂಕು ಆಸ್ಪತ್ರೆ ನಿರ್ಮಾಣದತ್ತ ಗಮನಹರಿಸಲಿ.
ಕೆ.ಎಸ್.ಕಾರ್ತಿಕ್ ಮುಖ್ಯ ಕಾರ್ಯನಿರ್ವಣಾಧಿಕಾರಿ, ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್, ಗೋಣಿಕೊಪ್ಪ
ವೈಯಕ್ತಿಕವಾಗಿ ಆಸ್ಪತ್ರೆ ನಿರ್ಮಾಣದ ಬಗ್ಗೆ ಗಮನಹರಿಸಿದ್ದೇನೆ. ತಾಲೂಕು ಆಸ್ಪತ್ರೆ ಕುರಿತಾಗಿ ಈಗಾಗಲೇ ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆಯಲಾಗಿದೆ. ಅಲ್ಲಿಂದ ಅನುಮೋದನೆ ಸಿಕ್ಕಿ, ಅನುದಾನ ಬಿಡುಗಡೆಯಾದ ಕೂಡಲೇ ಕಾಮಗಾರಿ ಆರಂಭವಾಗಲಿದೆ.
ಎ.ಎಸ್.ಪೊನ್ನಣ್ಣ ಶಾಸಕ, ವಿರಾಜಪೇಟೆ ಕ್ಷೇತ್ರ
ಕೊಡಗಿನ ಜನರ ಬಹುಬೇಡಿಕೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕನಸು ಇನ್ನೂ ಈಡೇರಿಲ್ಲ. ಮಡಿಕೇರಿ ಭಾಗದಲ್ಲಿ ವೈದ್ಯಕೀಯ ಕಾಲೇಜು ಇದೆ. ಆದರೆ ದಕ್ಷಿಣ ಕೊಡಗಿನ ಭಾಗದ ಜನರು ಮೈಸೂರನ್ನೇ ಅವಲಂಬಿಸಬೇಕಾಗಿದೆ. ಆನೇಚೌಕೂರು ದಾರಿಯಲ್ಲಿ ಹಂಪ್ಸ್‌ಗಳನ್ನು ದಾಟಿ ಹೋಗುವಾಗಲೇ ರೋಗಿ ಮೃತಪಟ್ಟಿರುತ್ತಾನೆ. ಹಾಗಾಗಿ ಈ ಭಾಗದಲ್ಲಿ ನಿರ್ಮಾಣವಾದರೆ ಉತ್ತಮ ದರ್ಜೆಯದ್ದಾಗಿರಲಿ. ಜತೆಗೆ ಎಲ್ಲ ಸೌಕರ್ಯಗಳೂ ಸಿಗುವಂತಾಗಲಿ.
ಚಿರಿಯಪಂಡ ರಾಜಾ ನಂಜಪ್ಪ ಮಾಜಿ ಅಧ್ಯಕ್ಷ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ
ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಾಗಿ ಹಾಡಿ ನಿವಾಸಿಗಳು, ಪರಿಶಿಷ್ಟ ಜಾತಿ ಮತ್ತು ಪಂಗಡದವರು ವಾಸವಿದ್ದಾರೆ. ಇವರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ದೂರದ ದುಬಾರಿ ಆಸ್ಪತ್ರೆಗಳಿಗೆ ತೆರಳುವುದು ಕನಸಿನ ಮಾತು. ಹಾಗಾಗಿ ತಾಲೂಕಿನಲ್ಲಿಯೇ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಾಣವಾದಲ್ಲಿ ಬಡ ವರ್ಗದವರಿಗೆ ಉತ್ತಮ ಆರೋಗ್ಯ ಸವಲತ್ತು ಸಿಕ್ಕಂತಾಗುತ್ತದೆ.
ಸಿಂಗಿ ಸತೀಶ್ ಜಿಲ್ಲಾಧ್ಯಕ್ಷ, ಆದಿಜಾಂಬವ ಯುವ ಸೇನೆ, ಕೊಡಗು
ಇಂದಿನ ದಿನಗಳಲ್ಲಿ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದು, ಎಂತಹ ಕಾಯಿಲೆಗೂ ಮದ್ದು ಸಿಗಲಿದೆ. ಆದರೆ ಪೊನ್ನಂಪೇಟೆ ತಾಲೂಕಿನಲ್ಲಿ ಕನಿಷ್ಠ ತಾಲೂಕು ಆಸ್ಪತ್ರೆ ಇಲ್ಲದಿರುವುದು ವಿಪರ್ಯಾಸ. ಅನಾರೋಗ್ಯ ಪೀಡಿತರು ಉತ್ತಮ ಚಿಕಿತ್ಸೆಗೆ ಹೊರ ಜಿಲ್ಲೆಯನ್ನೇ ಆಶ್ರಯಿಸಬೇಕಾಗಿದೆ. ಇನ್ನಾದರು ಈ ಭಾಗದ ಶಾಸಕರು, ಅಧಿಕಾರಿಗಳು ಇತ್ತ ಗಮನಹರಿಸಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ಸಿಗುವಂತೆ ಮಾಡಲಿ.
ಶ್ರೀಕಾಂತ್ ಉಪಾಧ್ಯಕ್ಷ, ಶಿವಾಜಿ ಯುವ ಸೇನೆ, ಗೋಣಿಕೊಪ್ಪ
ಈಗಾಗಲೇ ಕೆಎಚ್‌ಎಸ್‌ಡಿಆರ್‌ಪಿ ಇಂಜಿನಿಯರ್‌ಗಳು ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಅಂದಾಜು ಪಟ್ಟಿ ಸಲ್ಲಿಸಿದ್ದಾರೆ. ಸರ್ಕಾರದಿಂದ ಅನುಮೋದನೆ ಸಿಕ್ಕ ಕೂಡಲೇ ಕಾಮಗಾರಿ ಆರಂಭವಾಗುತ್ತದೆ. ಇಲ್ಲಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಲಿದೆ. ಎಲ್ಲ ರೀತಿಯ ಸ್ಪೆಷಲಿಸ್ಟ್‌ಗಳನ್ನೂ ಇಲ್ಲಿಗೆ ನಿಯೋಜನೆ ಮಾಡಲಾಗುವುದು.
ಡಾ.ಎಚ್.ಆರ್.ಯತೀರಾಜ್ ತಾಲೂಕು ವೈದ್ಯಾಧಿಕಾರಿ