ಆರಂಭದಲ್ಲೇ ಮಧುಮೇಹ ಪತ್ತೆ ಹಚ್ಚಿ, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸಲಹೆ, ಜಿಪಂ ಸಭಾಂಗಣದಲ್ಲಿ ವಿಶ್ವ ಮಧುಮೇಹ ದಿನಾಚರಣೆ

1c6e9a93-e110-469a-a06a-ccab24c9c791
Published on

ಬೆಂಗಳೂರು ಗ್ರಾಮಾಂತರ: ಇತ್ತೀಚಿನ ದಿನಗಳಲ್ಲಿ 30 ವರ್ಷ ಮೇಲ್ಪಟ್ಟವರಲ್ಲಿ ಮಧುಮೇಹ ಸಮಸ್ಯೆ ಕಂಡುಬರುತ್ತಿದೆ. ಈ ಕುರಿತು ಸ್ಥಳೀಯವಾಗಿ ಅರಿವು ಮೂಡಿಸುವ ಜತೆಗೆ, ಜಿಲ್ಲೆಯಲ್ಲಿ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳಬೇಕು. ಆರಂಭಿಕ ಹಂತದಲ್ಲೇ ಸಮಸ್ಯೆ ಪತ್ತೆ ಮಾಡಿ ಔಷಧ ಹಾಗೂ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸೂಚಿಸಿದರು.

ದೇವನಹಳ್ಳಿಯ ಜಿಲ್ಲಾಡಳಿತ ಭವನದಲ್ಲಿರುವ ಜಿಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಶ್ವ ಮಧುಮೇಹ ದಿನಾಚರಣೆ ಹಾಗೂ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ಮಧುಮೇಹ ತಪಾಸಣೆ ಹಾಗೂ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ನ.21ರವರಗೆ ಮಧುಮೇಹ ತಪಾಸಣಾ ಹಾಗೂ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು.

ಹಳ್ಳಿಗಳಲ್ಲೂ ಹೆಚ್ಚು: ಆಧುನಿಕ ಜೀವನಶೈಲಿ, ಒತ್ತಡ, ಚಟುವಟಿಕೆ ರಹಿತ ದಿನಚರಿ ಹಾಗೂ ಆಹಾರ ಪದ್ಧತಿಯಲ್ಲಿ ಬದಲಾವಣೆ ಮುಂತಾದ ಕಾರಣದಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹ, ಇನ್ನಿತರ ಕಾಯಿಲೆಗಳು ಬರುತ್ತಿವೆ. ಮಧುಮೇಹ ಪಟ್ಟಣದ ಜನರಿಗೆ ಮಾತ್ರವಲ್ಲದೆ ಗ್ರಾಮೀಣರಲ್ಲೂ ಹೆಚ್ಚಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಮಧುಮೇಹ ನಿರ್ಲಕ್ಷಿಸಿದರೆ ಹೃದಯಾಘಾತ, ಕಿಡ್ನಿ ವೈಫಲ್ಯ, ನರದೌರ್ಬಲ್ಯ, ಕಣ್ಣಿನ ದೃಷ್ಟಿ ಕ್ಷೀಣತೆ ಸೇರಿ ಬಹು ಅಂಗಾಂಗ ವೈಫಲ್ಯಗಳಿಗೆ ಕಾರಣವಾಗುತ್ತದೆ. ಜನರು ಅಕಾಲಿಕವಾಗಿ ಪ್ರಾಣ ಕಳೆದುಕೊಳ್ಳುವಂತಾಗುತ್ತದೆ ಎಂದು ತಿಳಿಸಿದರು. ಸದಾ ಖುಷಿಯಿಂದಿದ್ದು, ಯೋಗ, ನಡಿಗೆ ಹಾಗೂ ಸರಿಯಾದ ಆಹಾರ ಕ್ರಮ ಅಳವಡಿಸಿಕೊಂಡು, ಮಧುಮೇಹದಿಂದ ದೂರ ಉಳಿಯಬೇಕು ಎಂದು ಸಲಹೆ ನೀಡಿದರು.

ಶೇ.10 ಮಧುಮೇಹ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತಿಪ್ಪೇಸ್ವಾಮಿ ಮಾತನಾಡಿ, ದೇಶದಲ್ಲಿ ಶೇ.10 ಜನ ಮಧುಮೇಹದಿಂದ ಬಳಲುತ್ತಿದ್ದಾರೆ. ಜಿಲ್ಲೆಯಲ್ಲಿನ ತಾಲೂಕು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 30 ವರ್ಷ ಮೇಲ್ಪಟ್ಟವರಿಗೆ ರಕ್ತಪರೀಕ್ಷೆ ಮಾಡಿ, ಮಧುಮೇಹ ಸಮಸ್ಯೆ ಇದ್ದಲ್ಲಿ, ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು. ಮಹಿಳೆಯರಲ್ಲಿ ಕಂಡುಬರುವ ಸ್ತನ ಕ್ಯಾನ್ಸರ್, ಗರ್ಭಕೋಶ ಸಂಬಂಧಿತ ಕಾಯಿಲೆ ಹಾಗೂ ಪುರುಷರಲ್ಲಿ ಹೆಚ್ಚಾಗುತ್ತಿರುವ ಬಾಯಿ ಕ್ಯಾನ್ಸರ್ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net