ಆರಂಭದ ಮರುದಿನವೇ ಉರುಳಿದ ಶಾಲೆ ಕಟ್ಟಡ

ULL.MAY-17-1, KINYA SCHOOL
Published on

ಉಳ್ಳಾಲ: ಕಿನ್ಯ ಗ್ರಾಮದ ಬೆಳರಿಂಗೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡ ಶಾಲಾರಂಭದ ಮರುದಿನವೇ ಉರುಳಿ ಬಿದ್ದಿದ್ದು, ಅಧಿಕಾರಿಗಳ ನಿರ್ಲಕ್ಷೃ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ.

30 ವರ್ಷ ಹಿಂದಿನ ಕಿನ್ಯ ಬೆಳರಿಂಗೆ ಹೆಂಚಿನ ಶಾಲಾ ಕಟ್ಟಡ ಸಂಪೂರ್ಣ ಶಿಥಿಲವಾಗಿತ್ತು. 1932ರಲ್ಲಿ ಶಾಲೆ ಆರಂಭಗೊಂಡಿದ್ದು, 1ರಿಂದ 8ನೇ ತರಗತಿ ನಡೆಯುತ್ತಿತ್ತು. ಕಟ್ಟಡ ಹಳೆಯದಾಗಿದ್ದರಿಂದ 2019ರಿಂದ ಶಿಕ್ಷಣ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಕಟ್ಟಡ ತೆರವುಗೊಳಿಸುವಂತೆ ಶಾಲಾಡಳಿತ ನಿರಂತರ ಮನವಿ ಸಲ್ಲಿಸುತ್ತಿದೆ.

ಕಟ್ಟಡ ಶಿಥಿಲವಾಗಿದೆ ಎನ್ನುವುದಕ್ಕೆ ಇಂಜಿನಿಯರ್ ಪ್ರಮಾಣಪತ್ರ ನೀಡದಿದ್ದರೂ, ಮೌಖಿಕವಾಗಿ ತಿಳಿಸಿದ್ದರು ಎನ್ನಲಾಗಿದೆ. ಕಳೆದ ವರ್ಷ ಶಿಕ್ಷಣಾಧಿಕಾರಿ ಶಾಲೆಗೆ ಭೇಟಿ ನೀಡಿ ತರಗತಿ ನಡೆಸದಂತೆ ಸೂಚಿಸಿದ್ದರಿಂದ ಕಟ್ಟಡವನ್ನು ಬಂದ್ ಮಾಡಿ ಮಕ್ಕಳು ಹೋಗದಂತೆ ಕ್ರಮ ವಹಿಸಿ ಬಳಿಕ ಪಕ್ಕದಲ್ಲೇ ಇರುವ ಮದ್ರಸಾದಲ್ಲಿ ತರಗತಿ ನಡೆಸಲಾಗುತ್ತಿತ್ತು. ಕಳೆದ ವರ್ಷ ಶಾಸಕರು ಅನುದಾನ ನೀಡಿದ್ದು, ಎರಡು ಕೋಣೆಗಳ ಕಟ್ಟಡ ನಿರ್ಮಾಣವಾಗಿ, ಮುಂದಿನ ವಾರ ಉದ್ಘಾಟನೆ ಬಳಿಕ ಹಳೆಯ ಕಟ್ಟಡ ಕೆಡವಲು ಯೋಜನೆ ರೂಪಿಸಲಾಗಿತ್ತು.

ಕಳೆದ ವರ್ಷ ಇಲ್ಲಿ 120 ಮಕ್ಕಳಿದ್ದರೆ, ಈ ವರ್ಷ 101 ಮಕ್ಕಳಿದ್ದು, ಹೊಸ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಸೋಮವಾರ ಶಾಲೆ ಆರಂಭಗೊಂಡಿದ್ದು, ಮದ್ರಸಾದಲ್ಲೇ ತರಗತಿ ನಡೆಸಲಾಗಿತ್ತು. ಸೋಮವಾರ ರಾತ್ರಿ ಮಳೆ ಬಂದಿದ್ದು, ಪರಿಣಾಮ ಶಾಲಾ ಕಟ್ಟಡ ರಾತ್ರಿ ಸಂಪೂರ್ಣ ಧರಾಶಾಹಿಯಾಗಿದೆ. ಸ್ಥಳಕ್ಕೆ ಕಿನ್ಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net