

ಎನ್.ಆರ್.ಪುರ: ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಶಿವಮೊಗ್ಗ ಮುಖ್ಯರಸ್ತೆ ಸಮೀಪದ ಆರಂಬಳ್ಳಿ, ಭದ್ರಾ ಕಾಲನಿ ರಸ್ತೆಯಲ್ಲಿ ಭಾನುವಾರ ಮಧ್ಯಾಹ್ನ ಅರ್ಧ ಗಂಟೆ ಕಾಲ ಎರಡು ಕಾಡಾನೆಗಳು ನಿಂತಿದ್ದರಿಂದ ವಾಹನ ಸವಾರರು ಆತಂಕಗೊಂಡಿದ್ದರು. ಆರಂಬಳ್ಳಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ಆರಂಬಳ್ಳಿ, ಭದ್ರಾ ಕಾಲನಿಯ ರಸ್ತೆಯಲ್ಲಿ ಮಧ್ಯಾಹ್ನ 12.30ರಿಂದ 1 ಗಂಟೆಯವರೆಗೆ ಎರಡು ಕಾಡಾನೆಗಳು ನಿಂತುಕೊಂಡಿದ್ದವು.
ಆನೆಗಳು ಬಂದಿರುವುದಾಗಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ಮುತ್ತಿನಕೊಪ್ಪ ಉಪ ವಲಯ ಅರಣ್ಯಾಧಿಕಾರಿ ಮಾರುತಿ ಎಸ್. ಮೌಳಿ, ಅರಣ್ಯ ಸಿಬ್ಬಂದಿ ಹಾಗೂ ಮುತ್ತಿನಕೊಪ್ಪದಲ್ಲಿರುವ ಎಲಿಫೆಂಟ್ ಟಾಸ್ಕ್‌ಫೋರ್ಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾಡಾನೆಗಳನ್ನು ಮರಳಿ ಅರಂಬಳ್ಳಿ ಮೀಸಲು ಅರಣ್ಯಕ್ಕೆ ಅಟ್ಟಿದರು.
ಒಂದು ವಾರದಿಂದ ಆರಂಬಳ್ಳಿ, ಕುಸುಬೂರು, ನೆಲಗದ್ದೆ, ಕಡಹಿನಬೈಲು ಗ್ರಾಮದ ಭೀಮನರಿ, ಚೆನ್ನಮಣಿ, ನೇರ್ಲೆಕೊಪ್ಪದಲ್ಲಿ ಕಾಡಾನೆಗಳು ರಾತ್ರಿ ಹೊತ್ತಿನಲ್ಲಿ ತೋಟಕ್ಕೆ ನುಗ್ಗಿ ಅಡಕೆ ಸಸಿ, ಬಾಳೆಮರಗಳನ್ನು ತಿನ್ನುತ್ತಿವೆ. ಹಗಲು ಹೊತ್ತಿನಲ್ಲಿ ಸಮೀಪದ ಅರಣ್ಯದಲ್ಲಿರುತ್ತವೆ. ಅರಣ್ಯ ಇಲಾಖೆಯವರು ಅಲ್ಲಲ್ಲಿ ಎಚ್ಚರಿಕೆಯ ಬ್ಯಾನರ್ ಹಾಕಿಸಿದ್ದಾರೆ. ಮೈಕ್ ಮೂಲಕ ಪ್ರಚಾರ ಮಾಡಿ, ರಸ್ತೆಯ ಎರಡೂ ಬದಿ ಅರಣ್ಯ ಇರುವ ಕಡೆ ಅನಗತ್ಯವಾಗಿ ರಾತ್ರಿ ಹೊತ್ತಿನಲ್ಲಿ ವಾಹನ ಸಂಚಾರ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.