

ವಿಕ್ರಮ ನಾಡಿಗೇರ ಧಾರವಾಡ
ಅನುದಾನಿತ, ಖಾಸಗಿ ಶಾಲೆಗಳಲ್ಲಿ ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದಿರುವ "ಶಿಕ್ಷಣ ಹಕ್ಕು ಕಾಯಿದೆ' (ಆರ್ಟಿಇ) ಪ್ರಯೋಜನ ಪಡೆಯಲು ಜಿಲ್ಲೆಯ ಪಾಲಕರು ನಿರಾಸಕ್ತಿ ತೋರುತ್ತಿದ್ದಾರೆ. ಇದೇ ಕಾರಣಕ್ಕೆ ವರ್ಷದಿಂದ ವರ್ಷಕ್ಕೆ ಆರ್ಟಿಇ ಮಹತ್ವ ಕಳೆದುಕೊಳ್ಳುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಶೇ.25ರಂತೆ ಒಟ್ಟು 672 ಸೀಟುಗಳನ್ನು ಆರ್ಟಿಇ ಅಡಿ ಮೀಸಲಿಡಲಾಗಿದೆ. ಆದರೆ ಈವರೆಗೆ ಒಂದನೇ ಸುತ್ತಿನ ಪ್ರವೇಶ ಪ್ರಕ್ರಿಯೆಯಲ್ಲಿ 252 ಜನರು ಮಾತ್ರ ದಾಖಲಾತಿ ಮಾಡಿಕೊಂಡಿದ್ದಾರೆ. ಹೀಗಾಗಿ ಮಕ್ಕಳ ದಾಖಲಾತಿಗೆ ಪಾಲಕರು ಆಸಕ್ತಿ ವಹಿಸುತ್ತಿಲ್ಲ ಎಂಬುದು ಸ್ಪಷ್ಟ.
ಸರ್ಕಾರಿ ಶಾಲೆಗಳು ಇಲ್ಲದ ಪ್ರದೇಶದಲ್ಲಿನ ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶೇ. 25ರಷ್ಟು ಸೀಟುಗಳಿಗೆ ಆರ್ಟಿಇ ಅಡಿ ಎರಡು ಹಂತಗಳಲ್ಲಿ ಪ್ರವೇಶಾತಿ ನೀಡಲಾಗುತ್ತದೆ. ಅದರಂತೆ ಜಿಲ್ಲೆಯಲ್ಲಿ 672 ಸೀಟಿಗಳಿಗೆ ಆರ್ಟಿಇ ಅಡಿ ಅರ್ಜಿ ಆಹ್ವಾನಿಸಲಾಗಿದೆ. ಆದರೆ ಜನರು ಮಾತ್ರ ಆರ್ಟಿಇ ಅಡಿ ಪ್ರವೇಶ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಒಟ್ಟು 672 ಸೀಟುಗಳ ಪೈಕಿ ಮೊದಲ ಹಂತಕ್ಕೆ 458 ಸೀಟುಗಳನ್ನು ಮೀಸಲಿಡಲಾಗಿತ್ತು. ಈ ಪೈಕಿ 252 ಸೀಟುಗಳು ಮಾತ್ರ ಭರ್ತಿ ಆಗಿವೆ. ಹೀಗಾಗಿ ಉಳಿದ ಸೀಟುಗಳು 2ನೇ ಹಂತಕ್ಕೆ ಸೇರಲಿವೆ.
ಮೊದಲ ಸುತ್ತಿನ ಪ್ರವೇಶಾತಿಯಲ್ಲಿ ಧಾರವಾಡ ಗ್ರಾಮೀಣ ವ್ಯಾಪ್ತಿಯ ಶಾಲೆಗಳಲ್ಲಿ 38 ಸೀಟುಗಳ ಪೈಕಿ 0, ಧಾರವಾಡ ನಗರದಲ್ಲಿ 160ರಲ್ಲಿ 49, ಪಾಲಿಕೆ ವ್ಯಾಪ್ತಿಯಲ್ಲಿ 392ರ ಪೈಕಿ 193, ಹುಬ್ಬಳ್ಳಿ ನಗರದಲ್ಲಿ 29ರ ಪೈಕಿ 2, ಕುಂದಗೋಳದಲ್ಲಿ 28ರ ಪೈಕಿ 4, ನವಲಗುಂದದಲ್ಲಿ 25ರ ಪೈಕಿ 4 ಸೀಟುಗಳು ಮಾತ್ರ ಭರ್ತಿ. ಈಗಾಗಲೇ ಶಾಲೆ ಆರಂಭವಾಗಿ ತಿಂಗಳು ಗತಿಸಿರುವ ಕಾರಣಕ್ಕೆ ಉಳಿದ ಸೀಟುಗಳು ಸಂರ್ಪೂಣ ಭರ್ತಿ ಆಗುವುದು ಅನುಮಾನ ಎನ್ನಲಾಗುತ್ತಿದೆ.
ಈ ಕಾಯಿದೆ ಆರಂಭವಾದ ದಿನಗಳಲ್ಲಿ ಸೀಟು ಪಡೆಯಲು ಸಾಕಷ್ಟು ಪೈಪೋಟಿ ಇತ್ತು. ಆದರೆ ವರ್ಷದಿಂದ ವರ್ಷಕ್ಕೆ ಪಾಲಕರೂ ನಿರಾಸಕ್ತಿ ತೋರುತ್ತಿದ್ದಾರೆ ಎಂಬುದಕ್ಕೆ ಸದ್ಯ ಭರ್ತಿ ಆಗಿರುವ ಸೀಟುಗಳ ಅಂಕಿ-ಸಂಖ್ಯೆಯೇ ಸಾಕ್ಷಿ. 2009ರಲ್ಲಿ ಕಾಯ್ದೆಯಡಿ ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶೇ. 25ರಷ್ಟು ಸೀಟುಗಳನ್ನು ನೀಡುವ ವ್ಯವಸ್ಥೆ ಜಾರಿಯಾಗಿದೆ. ಆಗ ಮೀಸಲಿಟ್ಟ ಸೀಟ್ಗಳಿಗಿಂತ ಹೆಚ್ಚು ಅರ್ಜಿ ಬರುತ್ತಿದ್ದ ಕಾರಣ ಲಾಟರಿ ಪದ್ಧತಿ ತರಲಾಗಿತ್ತು. ಆದರೆ 2018-19ರ ನಂತರದಲ್ಲಿ ಆರ್ಟಿಇ ಅಡಿ ಎಲ್ಲ ಖಾಸಗಿ ಶಾಲೆಗಳಲ್ಲಿ ಶೇ. 25ರಷ್ಟು ಸೀಟು ನೀಡುವುದನ್ನು ಸ್ಥಗಿತ ಮಾಡಿ ಸರ್ಕಾರಿ ಶಾಲೆಗಳು ಸಮೀಪ ಇಲ್ಲದ ಕಡೆಗಳಲ್ಲಿನ ಶಾಲೆಗಳಿಗೆ ಮಾತ್ರ ಸೀಟು ಹಂಚಿಕೆ ಮಾಡಲಾಗುತ್ತಿದೆ.
ಆರ್ಟಿಇ ಸದ್ಯ ಮೊದಲ ಸುತ್ತಿನ ಪ್ರವೇಶ ಪ್ರಕ್ರಿಯೆ ಮುಗಿದಿದೆ. ಮುಂದಿನ ವಾರದಲ್ಲಿ ಇನ್ನೂ ಒಂದು ಸುತ್ತಿನ ಪ್ರಕ್ರಿಯೆ ನಡೆಯಲಿದೆ. ಆ ಸಮಯದಲ್ಲಿ ಎಲ್ಲ ಸೀಟುಗಳು ಭತಿರ್ಯಾಗುವ ಸಾಧ್ಯತೆ ಇದೆ. ಅರ್ಜಿ ಸಲ್ಲಿಸಿದ ಮಕ್ಕಳಿಗೆ ತಮಗೆ ಬೇಕಾದ ಶಾಲೆ ಸಿಗದ ಕಾರಣ ಪ್ರವೇಶಾತಿಯಿಂದ ಹಿಂದೆ ಸರಿದಿರಬಹುದು. ಹೀಗಾಗಿ ಮೊದಲ ಸುತ್ತಿನಲ್ಲಿ ತಕ್ಕ ಮಟ್ಟಿಗೆ ಪ್ರವೇಶಾತಿ ಆಗಿದೆ.*ಎಸ್.ಎಸ್. ಕೆಳದಿಮಠ, ಡಿಡಿಪಿಐ