ಆಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ

ಆಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ
Published on

ಹಾಸನ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಡಿ.ಕೆ.ಶಿವಕುಮಾರ್ ತಾವೂ ಸಹ ಹಿಂದುಗಳು ಎನ್ನುವ ಅವರು ಆರ್‌ಎಸ್‌ಎಸ್‌ಅನ್ನು ಹಿಂದು ವಿರೋಧಿ ಎನ್ನುತ್ತಾರೆ. ಆರ್‌ಎಸ್‌ಎಸ್ ಅಥವಾ ಬಿಜೆಪಿಗೆ ಬೇರೆ ಹಿಂದುತ್ವ ಇದೆಯೇ. ಯಾವ ಅರ್ಥದಲ್ಲಿ ಕಾಂಗ್ರೆಸ್‌ನ ನಾಯಕರು ಹೀಗೆಲ್ಲ ಮಾತನಾಡುತ್ತಿದ್ದಾರೆಂಬುದು ಅರ್ಥವಾಗುತ್ತಿಲ್ಲ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ನಗರದ ಸೀತಾರಾಮಂಜನೇಯ ದೇವಾಲಯದ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಆಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಹಿಂದುಗಳು ಒಂದಾಗಿ ಇರದಿದ್ದರೆ ರಾಮ ಮಂದಿರ ಕಟ್ಟುತ್ತಿರಲ್ಲಿ. ಕಾಂಗ್ರೆಸ್‌ನವರು ಮುಸ್ಲಿಮರ ಓಲೈಕೆಗಾಗಿ ಇತಿಹಾಸವನ್ನು ತಿರುಚಿವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.
ಉತ್ತರ ಪ್ರದೇಶದ ಆಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮ ಮಂದಿರವು ದೇಶದ ಕೋಟ್ಯಂತರ ಹಿಂದುಗಳ ಅಸ್ತಿತ್ವದ ಪ್ರಶ್ನೆಯಾಗಿತ್ತು. ಹಿಂದೂಗಳೆಲ್ಲರೂ ಒಂದಾಗಿದ್ದರಂದಲೇ ಭವ್ಯ ಮಂದಿರ ತಲೆ ಎತ್ತಿದೆ. ನಾವು ಶಕ್ತಿಶಾಲಿಯಾದರೆ ಹಿಂದು ಅನ್ನುತ್ತಾರೆ ಇಲ್ಲವಾದರೆ ನಮಗೆ ಮರ್ಯಾದೆ ಇರುವುದಿಲ್ಲ. ರಸ್ತೆ ಪಕ್ಕದಲ್ಲಿ ಇರುವ ಮುಸ್ಲಿಮರ ಅಂಗಡಿಯನ್ನು ಸಹ ತೆರವುಗೊಳಿಸಲು ಹಿಂದೇಟು ಹಾಕುವ ಪರಿಸ್ಥಿತಿಯಲ್ಲಿ ನಾವಿದ್ದೆವು. ಆದರೆ ಇಂದು ವಿಶ್ವವೇ ಮೆಚ್ಚುವಂತಹ ರಾಮ ಮಂದಿರ ಕಟ್ಟಿದ್ದೇವೆ. ಈ ಕಾರಣಕ್ಕಾಗಿ ವಿದೇಶಿಗರು ಸಹ ಭಾರತವನ್ನು ಕೊಂಡಾಡುತ್ತಿದ್ದಾರೆ ಎಂದರು.
ಕೆಲವರು ಶ್ರೀರಾಮನ ಜನನ ಹಾಗು ಆಳ್ವಿಕೆಯ ಕುರಿತು ಪ್ರಶ್ನೆ ಮಾಡುತ್ತಾರೆ. 10 ಸಾವಿರ ವರ್ಷಗಳ ಹಿಂದೆ ಆತ ಜನ್ಮ ಪಡೆದಿರಬಹುದು. ಆದರೆ ಆದರ್ಶ ಪುರುಷನನ್ನು ಇಂದಿಗೂ ಸ್ಮರಿಸುತ್ತೇವೆ ಎಂದರೆ ಅದಕ್ಕೆ ಶ್ರೀರಾಮನ ಗುಣಗಳೇ ಕಾರಣ. ಸತ್ಯ, ನ್ಯಾಯ, ನಿಷ್ಠೆಗೆ ಮತ್ತೊಂದು ಹೆಸರೇ ಶ್ರೀರಾಮ ಎಂದು ಹೇಳಿದರು.
ರಾಮ ಮಂದಿರ ನಿರ್ಮಾಣಕ್ಕಾಗಿ ಸುಮಾರು 4 ಲಕ್ಷ ಜನರು ಪ್ರಾಣ ತ್ಯಾಗ ಮಾಡಿದ್ದಾರೆ. 1992ರ ಡಿ. 6ಂದು ನಡೆದ ಘಟನೆಯನ್ನು ಯಾರೂ ಮರೆಯಬಾರದು. ರಾಮ ಮಂದಿರಕ್ಕಾಗಿ ಅಂದು ಲಕ್ಷಾತರ ಜನರು ರಕ್ತ ಹರಿಸಿದ್ದಾರೆ. 1989 ಕೇಂದ್ರದಲ್ಲಿ ವಿ.ಪಿ.ಸಿಂಗ್, ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವ್. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದವು. ಎಲ್ಲಿಯೂ ರಾಮ ಭಕ್ತರು (ಕರ ಸೇವಕರು) ಆಯೋಧ್ಯೆ (ರಾಮಮಂದಿರ) ತಲುಪದಂತೆ ಅಂದಿನ ಸರ್ಕಾರಗಳು ಹೆಜ್ಜೆ ಹೆಜ್ಜೆಗೂ ಪೊಲೀಸರನ್ನು ನಿಯೋಜನೆ ಮಾಡಿದ್ದವು. ಹಾಗೂ ಮುಲಾಯಂ ಸಿಂಗ್ ಯಾದವ್ ಕರ ಸೇವಕರ ಮೇಲೆ ಗುಂಡು ಹಾರಿಸಲು ಸೂಚನೆ ನೀಡಿದ್ದರು. ಆದ ಕಾರಣ ನಾವೆಲ್ಲರೂ ಯಾವುದೇ ಗುಂಪಿನ ಮೂಲಕ ಹಾಗೂ ಭಜನೆ ಮಾಡದಂತೆ, ರೈಲಿನ ಒಂದೇ ಬೋಗಿಯಲ್ಲಿ ಸಂಚಾರ ಮಾಡದಂತೆ ವಿಶ್ವ ಹಿಂದೂ ಪರಿಷತ್ತು ಹಿರಿಯರು ಸೂಚನೆ ನೀಡಿದ್ದರು. ಅದರಂತೆ ನಾವೆಲ್ಲರೂ ಯಾವುದೇ ಗುಂಪಿನ ಮೂಲಕ ಹಾಗೂ ಭಜನೆ ಮಾಡದೆ ರೈಲಿನ ಒಂದೇ ಬೋಗಿಯಲ್ಲಿ ಸಂಚಾರ ಮಾಡದೆ ಪೊಲೀಸರ ಕಣ್ತಪ್ಪಿಸಿ ಆಯೋಧ್ಯೆ ತಲುಪಿದ್ದೆವು ಎಂದು ಸ್ಮರಿಸಿದರು.
ಸನಾತನ ಧರ್ಮ ನಾಶವಾಗಲಿ ಎಂದವರು ರಾಜಕೀಯವಾಗಿ ಅವರೇ ನಾಶವಾದರು. ಅಖಂಡ ಭಾರತ ಶ್ರೇಷ್ಠ ಭಾರತ ಎಂಬ ಕಲ್ಪನೆಯಡಿ ವಿಭಜನೆಯಾಗಿರುವ ಭಾರತವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ. ಈ ದೇಶದಲ್ಲಿ ರಾಮಮಂದಿರ ನಿರ್ಮಾಣವಾದರೆ ರಾಮರಾಜ್ಯ ನಿರ್ಮಾಣವಾಗುತ್ತಿದೆ. ರಾಮರಾಜ್ಯ ನಿರ್ಮಾಣವಾದರೆ ಈ ಈ ದೇಶದಲ್ಲಿ ದಿನನಿತ್ಯ ನಡೆಯುವ ಜಗಳ, ಮತಾಂತರ, ಭಯೋತ್ಪಾದನೆ ನಿಂತುಹೋಗಲಿದೆ ಎಂದರು.
ಹಿಂದು ಸಮಾಜದವರು ಕೈಲಾಗದವರು ಎಂದು ಹೇಳುತ್ತಿದ್ದರು. ಆದರೆ ಈಗ ಅದು ಬದಲಾಗಿದೆ. ಹಿಂದುಗಳೆಲ್ಲ ಒಂದಾಗಿದ್ದೇವೆ. ಆ ಕಾರಣಗಳಿಗಾಗಿ ರಾಮಮಂದಿರ ನಿರ್ಮಾಣವಾಯಿತು. ಮುಸ್ಲಿಮರಿಗಾಗಿ 60, ಕ್ರಿಶ್ಚಿಯನ್‌ರಿಗೆ 40 ರಾಷ್ಟ್ರಗಳಿವೆ. ಆದರೆ ಹಿಂದುಗಳಿಗೆ ಇರುವುದು ಭಾರತ ಮಾತ್ರ. ಅದಕ್ಕಾಗಿ ಭಾರತ ಮಾತೆಗೆ ಯಾವ ತೊಂದರೆಯಾಗದಂತೆ ನಾವೆಲ್ಲರೂ ಟೊಂಕ ಕಟ್ಟಿ ನಿಲ್ಲಬೇಕಿದೆ. ಧರ್ಮಕ್ಕೆ ಆಘಾತ ಎದುರಾದಾಗ ಹೋರಾಟಕ್ಕೆ ಸನ್ನದ್ಧರಾಗಿರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸಂಚಾಲಕ ವಿಜಯ್ ಕುಮಾರ್, ಪಾರಸ್‌ಮಲ್ ಇದ್ದರು.
ಇದಕ್ಕೂ ಮೊದಲು 2024ರ ಜ.22 ರಂದು ಅಯೋಧ್ಯೆಯ ರಾಮ ಮಂದಿರ ಲೋಕಾರ್ಪಣೆ ಆಗುತ್ತಿರುವ ಹಿನ್ನಲೆ ಮನೆ-ಮನೆಗೆ ಶ್ರೀ ರಾಮನ ಭಾವಚಿತ್ರ ಹಾಗು ಮಂತ್ರಾಕ್ಷತೆ ನೀಡುವ ಕಾರ್ಯಕ್ರಮ ದೇಶಾದ್ಯಂತ ಹಮ್ಮಿಕೊಂಡಿದ್ದು, ಹಾಸನದಲ್ಲಿ ಬುಧವಾರ ಬೈಕ್ ರ‌್ಯಾಲಿ ಹಮ್ಮಿಕೊಳ್ಳಲಾಗಿತ್ತು. ನಗರದ ರೈಲ್ವೆ ನಿಲ್ದಾಣ ಸಮೀಪದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳ್ಳಿ ರಥದ ಯಾತ್ರೆಗೆ ಚಾಲನೆ ನೀಡಲಾಯಿತು. ಮೆರವಣಿಗೆ ನಂತರ ಬಿ.ಎಂ.ರಸ್ತೆ, ಎನ್.ಆರ್ ವೃತ್ತ, ಹೇಮಾವತಿ ಪ್ರತಿಮೆ, ಮಹಾವೀರ ವೃತ್ತ, ಸಹ್ಯಾದ್ರಿ ಚಿತ್ರಮಂದಿರ, ಸಾಯಿಬಾಬಾ ದೇವಸ್ಥಾನ, ಸಾಲಗಾಮೆ ಗೇಟ್, ಸರ್ಕಾರಿ ಕಲಾ ಕಾಲೇಜು ಮಾರ್ಗವಾಗಿ ಸ್ಲೇಟರ್ಸ್ ಹಾಲ್ ಮೂಲಕ ಸೀತಾರಾಮ ಆಂಜನೇಯ ದೇವಸ್ಥಾನ ತಲುಪಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net