

ಚಿತ್ರದುರ್ಗ: ಒಳ ಮೀಸಲಾತಿ ಸಂಬಂಧ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಆಯೋಗದ ವರದಿ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದೆ ಎಂದು ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ದೂರಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಛಲವಾದಿ ಸಮುದಾಯಕ್ಕೆ ಶೇ. 5ರಷ್ಟು ಮೀಸಲಾತಿ ಎಂಬ ಮಾಹಿತಿ ಸೋರಿಕೆಯಾಗಿರುವ ಕುರಿತು ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ಸಮುದಾಯ ಗೊಂದಲದಲ್ಲಿದೆ ಎಂದರು.
ಸದಾಶಿವ ಆಯೋಗ, ನಾಗಮೋಹನ್ ದಾಸ್ ಆಯೋಗದ ವರದಿಗಾಗಿ ಸರ್ಕಾರ ಸಾರ್ವಜನಿಕರ ತೆರಿಗೆ ಹಣ ಅನಗತ್ಯವಾಗಿ ದುಂದುವೆಚ್ಚ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾಗಮೋಹನ್ ದಾಸ್ ಆಯೋಗ ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ. ವರದಿಯಲ್ಲಿ ಉತ್ತಮ ಉದ್ದೇಶವಿದೆಯೋ, ದುರುದ್ದೇಶವೋ ಎಂಬುದು ಅಧಿವೇಶನದಲ್ಲಿ ಚರ್ಚೆಯಾದ ಬಳಿಕ ಅದರ ಸತ್ಯಾಸತ್ಯತೆ ತಿಳಿಯಲಿದೆ ಎಂದರು.
ಎಐಸಿಸಿ ಅಧ್ಯಕ್ಷರಾದರೂ ಮಲ್ಲಿಕಾರ್ಜುನ ಖರ್ಗೆ ಅವರಿಗೂ ದೇಗುಲ ಪ್ರವೇಶ ನಿರ್ಬಂಧಿಸುವ ಪದ್ಧತಿ ಇದೆ. ನೀರು ಮುಟ್ಟಲು ಬಿಡುವುದಿಲ್ಲ. ಪರಿಶಿಷ್ಟರು ಶ್ರೀಮಂತರಾದರೂ, ಸಾಮಾಜಿಕ ಬಹಿಷ್ಕಾರದಿಂದ ಈಗಲೂ ಮುಕ್ತಿ ಹೊಂದಿಲ್ಲ. ದೇಶದೊಳಗೆ ಸಂವಿಧಾನಕ್ಕಿಂತ ದೊಡ್ಡವರು ಯಾರೂ ಇಲ್ಲ. ಅದಕ್ಕಾಗಿ ಸಾಮಾಜಿಕ ನ್ಯಾಯ ಪರಿಶಿಷ್ಟರಿಗೆ ಸಿಗಬೇಕು ಎಂದು ಒತ್ತಾಯಿಸಿದರು.
ಛಲವಾದಿ ತಿಪ್ಪೇಸ್ವಾಮಿ ಮಾತನಾಡಿ, ರಾಜಕೀಯ ಷಡ್ಯಂತ್ರ ಮೂಲಕ ರಾಜ್ಯದ ಛಲವಾದಿ ಸಮುದಾಯವನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. ಶೇ 5.5 ರಷ್ಟು ಮೀಸಲಾತಿ ಎಂಬ ಸದಾಶಿವ ಆಯೋಗ ನೀಡಿದ ವರದಿಯನ್ನೇ ಸಮುದಾಯ ಒಪ್ಪಿಲ್ಲ. ಈಗ ಶೇ 5ರಷ್ಟು ಎಂಬ ನಿವೃತ್ತ ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿ ಆತಂಕ ಉಂಟು ಮಾಡಿದೆ ಎಂದರು.
ಸಮುದಾಯದವರು 18 ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಂಗ್ರೆಸ್ ನಂಬಿ 16 ಮಂದಿ ಶಾಸಕರನ್ನು ಗೆಲ್ಲಿಸಿದ್ದಕ್ಕೆ ಸರ್ಕಾರ ಸಮುದಾಯಕ್ಕೆ ವಂಚಿಸಲು ಮುಂದಾಗಿದೆ. ಅನ್ಯಾಯವಾದಲ್ಲಿ ಕ್ರಾಂತಿಕಾರಿ ಹೋರಾಟಕ್ಕೂ ಸಮಾಜ ಸಿದ್ಧವಿದೆ ಎಂದು ಎಚ್ಚರಿಸಿದರು.
ಮುಖಂಡರಾದ ನಟರಾಜ್, ಡಿ.ಎಸ್. ಹಳ್ಳಿ ಜಗದೀಶ್, ಮಂಜುನಾಥ್, ಅರುಣ್‌ಕುಮಾರ್ ಇದ್ದರು.