

ಅರಸೀಕೆರೆ: ದೇಶದ ಉದ್ದಗಲಕ್ಕೂ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ಮೂಲಕ ಜಗತ್ತು ಭಾರತದತ್ತ ತಿರುಗಿ ನೋಡುವ ರೀತಿಯಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ವಿದ್ಯುತ್ ಖಾತೆಯ ರಾಜ್ಯ ಸಚಿವ ಕೃಷನ್ ಪಾಲ್ ಗುರ್ಜರ್ ಹೇಳಿದರು.
ತಾಲೂಕಿನ ಜಾವಗಲ್ ಗ್ರಾಮದ ವಿಟಿಎಸ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಪದಾಧಿಕಾರಿಗಳ ಸಭೆ ಉದ್ಘಾಟಿಸಿ ಮಾತನಾಡಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಬೇಕು ಎನ್ನುವ ಬಹುಸಂಖ್ಯಾತ ಭಾರತೀಯರ ದಶಕಗಳ ಕನಸು ನನಸು ಮಾಡುವಲ್ಲಿ ಸಫಲರಾಗಿದ್ದೇವೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿಯೊಬ್ಬ ರೈತನ ಖಾತೆಗೆ ಹಣ ತುಂಬು ಕೆಲಸ ಯಾರ ಕಾಲದಲ್ಲಿಯೂ ನಡೆದಿಲ್ಲ. ಅಲ್ಲದೇ ಜನಧನ್, ಉಜ್ವಲ, ಆಯುಷ್ಮಾನ್ ಭಾರತ್ ಯೋಜನೆ ಮೂಲಕ ದುರ್ಬಲ ವರ್ಗಗಗಳ ಕಲ್ಯಾಣಕ್ಕೆ ಯೋಜನೆ ರೂಪಿಸಲಾಗಿದೆ. ಕೈಗಾರಿಕೆಗಳ ಪುನಶ್ಚೇತನ ಪ್ರಥಮ ಆದ್ಯತೆಯಾಗಿದ್ದು ದುಡಿಯುವ ಕೈಗಳಿಗೆ ಉದ್ಯೋಗ ನೀಡಲಾಗಿದೆ. ರಾಜ್ಯಗಳ ನಡುವೆ ಸಂಚಾರ ಸುಗಮಗೊಳಿಸಲು ದಶ,ಚತುಷ್ಪಥ ಹೆದ್ದಾರಿಗಳ ನಿರ್ಮಾಣ ಭರದಿಂದ ಸಾಗಿವೆ. ಕಾಶಿ ವಿಶ್ವನಾಥ ದೇಗುಲ ನವೀಕರಣ ನಾಡಿನ ಜನರ ಜನಮನ ಸೂರೆಗೊಂಡಿದೆ. ವಾಸ್ತವ ಸಂಗತಿ ಅರಿಯದೇ ವಿಪಕ್ಷಗಳು ವಿನಾಕಾರಣ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಟೀಕೆ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಕೊಡುಗೆ- ಪ್ಲೋರೈಡ್ ಪೀಡಿತ ಸೀಮೆಯ ಜನರ ಜಲದಾಹ ನೀಗಿಸಲು ಜಲಜೀವನ್ ಮಿಷನ್ ಕಾರ್ಯಕ್ರಮದ ಅಡಿಯಲ್ಲಿ ಮನೆ ಮನೆಗೆ ಗಂಗೆ ಹೆಸರಿನಲ್ಲಿ ಶುದ್ದ ಕುಡಿಯುವ ನೀರು ಪೂರೈಕೆಗೆ ಒತ್ತು ನೀಡಲಾಗಿದೆ.ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ವಿನೂತನ ಯೋಜನೆ ಕ್ಷಿಪ್ರಗತಿಯಲ್ಲಿ ಸಾಗಿದ್ದು ನೂರಾರು ಕೋಟಿ ರೂ.ಅನುದಾನ ಬಿಡುಗಡೆಯಾಗಿದೆ.ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಡಬಲ್ ಇಂಜಿನ್ ಸರ್ಕಾರದ ಕೊಡುಗೆಯನ್ನುಮನೆ ಮನಗಳಿಗೆ ತಲುಪಿಸುವ ಗುರುತರ ಹೊಣೆಗಾರಿಕೆ ನಿಮ್ಮೆಲ್ಲರ ಮೇಲಿದೆ.2023ರ ವಿಧಾನಸಭಾ ಚುನಾವಣೆ ಗೆಲುವಿಗೆ ಉಭಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳೇ ಮಾನದಂಡವಾಗಬೇಕು ಎಂದು ಉತ್ಸಾಹ ತುಂಬಿದರು.
ಮಾಜಿ ಸಚಿವ ಸಿ.ಎಚ್.ವಿಜಯಶಂಕರ್,ರಾಜ್ಯ ಒಕ್ಕಲಿಗ ನಿಗಮದ ನಿರ್ದೇಶಕಿ ಸುರಭಿ ರಘು, ಮುಖಮಡರಾದ ಸಚ್ಚಿದಾನಂದ, ನವೀನ್,ಪರ್ವತಯ್ಯ,ಆನಂದ್,ಕುಸುಮಾ ರಾಜು,ಸೋಮಶೇಖರ್, ಮಧುಸೂಧನ್‌ಜೀವನ್ ಸೇರಿ ಹಲವರು ಪಾಲ್ಗೊಂಡಿದ್ದರು.