

ಕಲಬುರಗಿ: ಆಯುಷ್ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಣೆ ಮಾಡುವುದು ಸೇರಿ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಜಿಲ್ಲಾ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘದ ಸದಸ್ಯರು ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿದರು.
ವೈದ್ಯಕೀಯ ಶಿಕ್ಷಣ ಇಲಾಖೆಗೆ ನೀಡಿರುವಂತೆ ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ವರದಿಗನುಗುಣವಾಗಿ ಕರ್ನಾಟಕ ಸರ್ಕಾರದ ಆಯುಷ್ ಇಲಾಖೆ ವೈದ್ಯಾಧಿಕಾರಿಗಳಿಗೆ ಸರಿಸಮಾನ ವೇತನ-ಭತ್ಯೆ ಮಂಜೂರು ಮಾಡಬೇಕು. ಕೋವಿಡ್-19 ಚಿಕಿತ್ಸಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಆಯುಷ್ ವೈದ್ಯಾಧಿಕಾರಿಗಳಿಗೆ ಪ್ರೋತ್ಸಾಹ ಧನ ವಿಸ್ತರಿಸಬೇಕು.
ಆಯುಷ್ ಇಲಾಖೆಗೆ ಒಂದು ಬಾರಿ ಸೇವೆಗೆ ಸೇರಿದ ವೈದ್ಯರು ನಿವೃತ್ತಿಯವರೆಗೂ ವೈದ್ಯಾಧಿಕಾರಿ ಎಂಬ ಒಂದೇ ಪದನಾಮದಿಂದ ಸೇವೆ ನಿರ್ವಹಿಸಬೇಕಾಗಿದೆ. ಮುಂಬಡ್ತಿ ಅವಕಾಶ ಕಲ್ಪಿಸಬೇಕು. ಆಯುಷ್ ಇಲಾಖೆಯಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಕರ್ಾರಿ ಆಯುಷ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಕೆ.ಬಿ. ಬಬಲಾದಿ, ಉಪಾಧ್ಯಕ್ಷೆ ಡಾ.ಅರುಂಧತಿ ಕುಲಕರ್ಣಿ , ಕಾರ್ಯದರ್ಶಿ ಡಾ. ನೂರುಲ್ಲಾ ಹುಸೇನಿ ಹಾಗೂ ರಾಜ್ಯ ಪ್ರತಿನಿಧಿ ಡಾ. ಸುಧೀರ ಕುಳಗೇರಿ ಉಪಸ್ಥಿತರಿದ್ದರು.