

ಮೈಸೂರು: ಆಧುನೀಕತೆ, ಒತ್ತಡಗಳು ಹೆಚ್ಚಾದಂತೆ ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಎಲ್ಲರೂ ಪಣತೊಡಬೇಕು ಎಂದು ಶಾಸಕ ಎಸ್.ಎ.ರಾಮದಾಸ್ ವೈದ್ಯರಿಗೆ ಸಲಹೆ ನೀಡಿದರು.
ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಆಯುರ್ವೇದ ಅಕಾಡೆಮಿ ಬೆಂಗಳೂರು ಹಾಗೂ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದಿಂದ ‘ಬನ್ನಿ ಮಧುಮೇಹ ಗೆಲ್ಲೋಣ’ ಕಾರ್ಯಕ್ರಮದಡಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಉಚಿತ ಆಯುರ್ವೇದ ಮಧುಮೇಹ ಚಿಕಿತ್ಸಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಶ್ವಕ್ಕೆ ಆಯುರ್ವೇದ ಚಿಕಿತ್ಸಾ ಪದ್ಧತಿ ತಿಳಿಸಿಕೊಟ್ಟಿರುವ ಭಾರತ, ಸಾವಿರಾರು ವರ್ಷಗಳ ಹಿಂದೆಯೇ ಆಯುರ್ವೇದ ಪದ್ಧತಿಯಲ್ಲಿ ಅನೇಕ ಸಾಧನೆಯನ್ನು ಮಾಡಿದೆ. ಆದರೆ ಬ್ರಿಟಿಷರು ಬಂದ ಬಳಿಕ ನಮ್ಮ ಭಾರತೀಯ ವೈದ್ಯ ಪದ್ಧತಿ ಮೇಲೆಯೂ ಪರಿಣಾಮ ಬೀರಿ, ಪಾಶ್ಚಿಮಾತ್ಯ ಸಂಸ್ಕೃತಿ ಬಿತ್ತಿದಂತೆ ಇಂಗ್ಲಿಷ್ ಔಷಧ ಪದ್ಧತಿಯನ್ನು ಬಿತ್ತಿ ಹೋಗಿದ್ದಾರೆ. ಈಗಲೂ ನಮ್ಮವರು ಭಾರತೀಯ ವೈದ್ಯ ಪದ್ಧತಿ ಬಿಟ್ಟು, ಇಂಗ್ಲಿಷ್ ಪದ್ಧತಿಗೆ ಮೊರೆ ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಯಾವುದೇ ಅಡ್ಡ ಪರಿಣಾಮಗಳಿಲ್ಲದ ಆಯುರ್ವೇದ ಪದ್ಧತಿಯನ್ನು ಪ್ರಚಾರ ಮಾಡುವ ಕಾರ್ಯ ಹೆಚ್ಚು ನಡೆಯಬೇಕು. ಜೊತೆಗೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಇರುವ ಆಯುರ್ವೇದದಲ್ಲಿಯೂ ಅನೇಕ ಸಂಶೋಧನೆಗಳು ನಡೆಸಬೇಕಿದೆ. ಈ ನಿಟ್ಟಿನಲ್ಲಿ ವೈದ್ಯರು, ವಿದ್ಯಾರ್ಥಿಗಳು ಒಲವು ತೋರಬೇಕು ಎಂದು ಸಲಹೆ ನೀಡಿದರು.
ಮಧುಮೇಹ ಮುಕ್ತಕ್ಕೆ ಪಣತೊಡಿ:
ಭಾರತದ ಅಜಾದಿ ಕೀ ಅಮೃತ ಮಹೋತ್ಸವ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಮೈಸೂರನ್ನು ಮಧುಮೇಹ ಮುಕ್ತ ಹಾಗೂ ಆಯುರ್ವೇದ ನಗರವನ್ನಾಗಿ ಮಾಡಲು ವೈದ್ಯರು ಸಂಕಲ್ಪ ತೊಡಬೇಕು. ಪ್ರಯೋಗಿಕವಾಗಿ ಕೆ.ಆರ್.ಕ್ಷೇತ್ರದ ಒಂದು ವಾರ್ಡ್‌ಅನ್ನು ಆಯ್ಕೆ ಮಾಡಿಕೊಂಡು ಒಂದು ವರ್ಷಗಳ ಕಾಲ ಮಧುಮೇಹ ಮುಕ್ತಕ್ಕೆ ಕಾರ್ಯಕ್ರಮ ರೂಪಿಸಬೇಕು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಮಾತನಾಡಿ, ಪ್ರಾಚೀನ ಆಯುರ್ವೇದ ವೈದ್ಯಕೀಯ ಪದ್ಧತಿಯು ಸರ್ವಶ್ರೇಷ್ಠ ಪದ್ಧತಿಯಾಗಿದ್ದು, ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಮಧುಮೇಹ ಈಗ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದು, ಅದನ್ನು ನಿಯಂತ್ರಿಸಲು ಜನರಲ್ಲಿ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಅಭಿಯಾನ ಆಗಬೇಕು ಎಂದು ಹೇಳಿದರು.
ಆದಿಚುಂಚನಗಿರಿ ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಎ. ಶೇಖರ್ ಮಾತನಾಡಿ, ಪ್ರಾಚೀನ ಮತ್ತು ಆಧುನಿಕ ವೈದ್ಯ ಪದ್ಧತಿಗಳ ಸಮ್ಮಿಲನ ಚಿಕಿತ್ಸೆ ಅತ್ಯಂತ ಸಹಕಾರಿ. ಮಧುಮೇಹ ಚಿಕಿತ್ಸೆ ಮತ್ತು ಜಾಗೃತಿ ಜನರಲ್ಲಿ ಮೂಡಿಸುವುದು ಅತ್ಯಂತ ಶ್ರೇಷ್ಠ ಕರ್ತವ್ಯ ಎಂದು ಶ್ಲಾಘಿಷಿಸಿದರು.
ಮೈಸೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಜಿ. ಹೇಮಂತಕುಮಾರ್, ಆಯುಷ್ ಇಲಾಖೆಯ ಜಂಟಿ ನಿರ್ದೇಶಕ ಡಾ. ಆಂಜನೇಯ ಮೂರ್ತಿ, ಜೆಎಸ್‌ಎಸ್ ಆಯುರ್ವೇದ ಕಾಲೇಜಿನ ಹಿರಿಯ ವೈದ್ಯ ಡಾ. ಗುರುಬಸವರಾಜ್, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ, ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದ ಗಿರೀಶ್, ಆಯುರ್ವೇದ ಅಕಾಡೆಮಿಯ ಜಂಟಿ ಕಾರ್ಯದರ್ಶಿ ಡಾ. ಪ್ರಶಾಂತ್ ಗೋಖಲೆ ಇತರರು ಇದ್ದರು.
ಶಿಬಿರದಲ್ಲಿ ಸುಮಾರು 300 ಜನರನ್ನು ತಪಾಸಣೆ ನಡೆಸಿ ಉಚಿತ ಚಿಕಿತ್ಸೆ ಮತ್ತು ಆಯುರ್ವೇದ ಔಷಧ ವಿತರಿಸಲಾಯಿತು.