

ಕಲಬುರಗಿ: ವಿಶ್ವದಲ್ಲೇ ಆಯುರ್ವೇದ ಹೆಸರುವಾಸಿಯಾಗಿದ್ದು, ಆಯುರ್ವೇದ ಔಷಧಿಗೆ ಸರ್ಕಾರ ಉತ್ತೇಜನ ನೀಡುತ್ತಿದೆ ಎಂದು ಶಾಸಕ ಎಂ.ವೈ. ಪಾಟೀಲ್ ಹೇಳಿದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಆಯುಷ್ ಇಲಾಖೆ ಸಹಯೋಗದಡಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಆಯುರ್ವೇದ ದಿನ ಕಾರ್ಯಕ್ರಮವನ್ನು ಧನ್ವಂತ್ರಿ ದೇವಿ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಅವರು, ವೈಜ್ಞಾನಿಕ ಹಿನ್ನೆಲೆಯಲ್ಲಿ ಈ ಔಷಧಿ ಸೇವನೆ ಕಡಿಮೆಯಾಗಿದೆ. ಆದರೆ ಪುರಾತನ ಔಷಧಿ ಆಯುರ್ವೇದ ಅತ್ಯಂತ ಪರಿಣಾಮಕಾರಿಯಾಗಿದೆ. ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ಲಭ್ಯವಾಗಲಿದೆ. ಆಯುರ್ವೇದ ಆಸ್ಪತ್ರೆಗೆ ಸ್ಥಳದ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಮಾನವ ಭೂಮಿಗೆ ಬಂದಾಗಿನಿಂದ ಆಯುರ್ವೇದ ಇದೆ. ಹಿಂದಿನ ಕಾಲದಲ್ಲಿ ಆಯುರ್ವೇದ ಚಿಕಿತ್ಸೆಗೆ ಹೆಚ್ಚು ಪ್ರಾಧಾನ್ಯ ಇತ್ತು. ಬೇರುಗಳನ್ನು ಹೊಂದಿರುವ ಆಯುರ್ವೇದ ಪ್ರಾಚೀನ ಚಿಕಿತ್ಸಾ ವ್ಯವಸ್ಥೆ ಸಂರಕ್ಷಣೆ ಮತ್ತು ಉತ್ತೇಜನಕ್ಕೆ ಆದ್ಯತೆ ನೀಡಬೇಕಿದೆ. ಸಿರಿಧಾನ್ಯ ಸೇವನೆ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ರೋಗಮುಕ್ತರಾಗಬಹುದು ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಗಿರಿಜಾ ಎಸ್.ಯು. ಮಾತನಾಡಿ, ಆಯುರ್ವೇದ ಚಿಕಿತ್ಸೆ ಬರೀ ಮನುಷ್ಯರಿಗಲ್ಲದೆ ಪ್ರಾಣಿಗಳಿಗೂ ನೀಡಲಾಗುತ್ತಿದೆ. ಆಯುರ್ವೇದ ಇಡೀ ವಿಶ್ವಕೆ ಪ್ರಚಾರ ಆಗಬೇಕು. ರೋಗಬಾಧೆ ತಡಗಟ್ಟುವುದು ಇದರ ಉದ್ದೇಶ. ಆಯುರ್ವೇದ ಬಗ್ಗೆ ಹಲವಾರು ಶಾಲೆಗಳಲ್ಲಿ ಕ್ಯಾಂಪ್ ಮೂಲಕ ಅರಿವು ಮೂಡಿಸುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.
ಹಿಂಗುಲಾಂಬಿಕಾ ಆಯುರ್ವೇದ ಕಾಲೇಜು ಪ್ರಾಂಶುಪಾಲ ಡಾ.ಅಲ್ಲಮಪ್ರಭು ಗುಡ್ಡಾ, ಬಸವೇಶ್ವರ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಚನ್ನಮಲ್ಲಿಕಾರ್ಜುನ ದೇವಣಗಾಂವ್, ಸಮತಾ ಕಾಲೇಜಿನ ಪ್ರಾಶುಪಾಲ ಡಾ.ಸೋಮನಾಥ ಇತರರಿದ್ದರು. ಡಾ.ಸುಧೀರ ಕುಳಗೇರಿ ಸ್ವಾಗತಿಸಿದರು. ಡಾ.ಶ್ರೀಶೈಲ ಪಾಟೀಲ್ ನಿರೂಪಣೆ ಮಾಡಿದರು. ಡಾ.ಕೆ.ಬಿ. ಬಬಲಾದ್ ವಂದಿಸಿದರು.