ಆಯುರ್ವೇದಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಬೇಡಿಕೆ

MLA
Published on

ಚಿತ್ರದುರ್ಗ: ಸಾವಿರಾರು ವರ್ಷಗಳ ಇತಿಹಾಸವಿರುವ ಆಯುರ್ವೇದಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಹೆಚ್ಚು ಬೇಡಿಕೆಯಿದೆ ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಪ್ರಕೃತಿ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಥಮ ವರ್ಷದ ವಿದ್ಯಾರ್ಥಿಗಳ ಶಿಷ್ಯೋಪನಯನ ಸಂಸ್ಕಾರ ಮತ್ತು ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಮಾಜಕ್ಕೆ ವೈದ್ಯರ ಅಗತ್ಯವಿದ್ದು, ವೈದ್ಯಕೀಯ ಸೇವೆ ಅತ್ಯಂತ ಅಮೂಲ್ಯವಾಗಿದೆ. ಉನ್ನತ ಕಾಲೇಜುಗಳಲ್ಲಿ ಸಿಗುವ ಮೂಲಸೌಕರ್ಯ ಪ್ರಥಮ ವರ್ಷದಲ್ಲಿಯೇ ನಾವಿಲ್ಲಿ ಒದಗಿಸಿದ್ದೇವೆ. ಶ್ರದ್ಧೆಯಿಂದ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ. ಯಾವ ಫಲಾಪೇಕ್ಷೆ ಇಲ್ಲದೆ, ಕಳೆದ 40 ವರ್ಷಗಳಿಂದಲೂ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುತ್ತಿದ್ದೇನೆ ಎಂದರು.

ಎಂಬಿಬಿಎಸ್ ಸೀಟು ಪಡೆಯಲು ಕನಿಷ್ಠ 2 ಕೋಟಿ ರೂ. ಪಾವತಿಸಬೇಕು. ಆದರೆ, ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಅಷ್ಟೊಂದು ಶುಲ್ಕ ವಾವತಿಸಬೇಕಿಲ್ಲ. ಸಿಕ್ಕಿರುವ ಅವಕಾಶ ಸದ್ಬಳಕೆ ಮಾಡಿಕೊಂಡು ಪಾಲಕರು, ಜಿಲ್ಲೆ, ಶಿಕ್ಷಣ ಸಂಸ್ಥೆಗೆ ಕೀರ್ತಿ ತನ್ನಿ ಎಂದು ಸಲಹೆ ನೀಡಿದರು.

ಸಂಸ್ಥೆಯ ಸಿಇಒ ಎಂ.ಸಿ.ರಘುಚಂದನ್ ಮಾತನಾಡಿ, 40 ವರ್ಷಗಳ ಹಿಂದೆ ಚಿಕ್ಕದಾಗಿ ಆರಂಭಗೊಂಡ ಸಂಸ್ಥೆ ಈಗ ದೊಡ್ಡ ಹೆಮ್ಮರವಾಗಿ ಬೆಳೆದಿರುವುದರ ಹಿಂದೆ ಸಂಸ್ಥಾಪಕ ಡಾ.ಎಂ.ಚಂದ್ರಪ್ಪ ಅವರ ಪರಿಶ್ರಮವಿದೆ. ಬಿಇಡಿ ನರ್ಸಿಂಗ್, ಬಿಕಾಂ, ಬಿಸಿಎಂ, ಎಂಬಿಎ, ಫಾರ್ಮಿಸಿ ಹೀಗೆ ಎಲ್ಲ ರೀತಿಯ ಶಿಕ್ಷಣ ನೀಡಲಾಗುತ್ತಿದೆ. ಆಯುರ್ವೇದಿಕ್‌ಗೂ ಆದ್ಯತೆ ನೀಡಿದ್ದೇವೆ ಎಂದು ಹೇಳಿದರು.

ಜಿಲ್ಲಾ ಆಯುಷ್ ವಿಭಾಗದ ಡಿಎಒ ಡಾ.ಚಂದ್ರಕಾಂತ್ ಮಾತನಾಡಿ, ಕಾಲೇಜಿಗೆ ಪ್ರವೇಶ ಪಡೆದಾಕ್ಷಣ ವೈದ್ಯರಾಗಲು ಸಾಧ್ಯವಿಲ್ಲ. 5 ವರ್ಷಗಳ ನಂತರ ನಿಮಗೆ ಮತ್ತೆ ಯಾರು ಹೇಳಿಕೊಡುವುದಿಲ್ಲ. ಮುಂದೆ ಪಿಜಿ ಶಿಕ್ಷಣ ಪಡೆಯಬೇಕಾಗುತ್ತದೆ. ಆದ್ದರಿಂದ ಪ್ರಥಮ ವರ್ಷದಿಂದಲೇ ಕಲಿಕೆಗೆ ಒತ್ತು ನೀಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರಕೃತಿ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಚಾರ್ಯ ಡಾ.ಎಸ್.ಬಿ.ನವಾಝ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net