ಆಯುರ್ವೇದ ಔಷಧ ಖರೀದಿಗೆ ಸಮಸ್ಯೆ

30manju4-Web
ಬೆಳಗಾವಿ ನಗರದ ಆಯುರ್ವೇದಿಕ್ ಔಷಧ ಮಳಿಗೆಯೊಂದರ ಬಾಗಿಲಿಗೆ ಅಂಗಡಿ ತೆರೆಯುವ ಸಮಯ ಸೂಚಿಸುವ ಲಕ ಅಂಟಿಸಿರುವುದು.
Published on

ಬೆಳಗಾವಿ: ಕರೊನಾ ಸೋಂಕಿಕು ಪ್ರಕರಣ ಹೆಚ್ಚುತ್ತಿರುವ ಸಂದರ್ಭದಲ್ಲೇ ಜಿಲ್ಲೆಯಲ್ಲಿ ಆಯುರ್ವೇದ ಔಷಧ ಮಳಿಗೆಗಳನ್ನು ಬೆಳಗ್ಗೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ತೆರೆಯುತ್ತಿರುವುದರಿಂದ, ಮಧ್ಯಾಹ್ನದ ನಂತರ ಔಷಧ ಖರೀದಿಗೆ ಬರುವವರು ಸಮಸ್ಯೆ ಅನುಭವಿಸುವಂತಾಗಿದೆ. ಕೋವಿಡ್ ಸಂದರ್ಭದಲ್ಲಿ ಈ ರೀತಿ ಔಷಧ ಅಂಗಡಿ ಮುಚ್ಚುವುದು ಸರಿಯಲ್ಲ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರವು ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಜನತಾ ಕರ್ಫ್ಯೂ ಘೋಷಿಸಿದ್ದರೂ ವೈದ್ಯಕೀಯ ಕ್ಷೇತ್ರ ಹೊರತು ಪಡಿಸಿ ಎಲ್ಲ ಬಗೆಯ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿದೆ. ಆದರೆ, ದಿನದ 24 ಗಂಟೆಯೂ ಅಲೋಪಥಿ, ಆಯುರ್ವೇದ ಹಾಗೂ ಹೋಮಿಯೋಪಥಿ ಸೇರಿ ಜನೌಷಧ ಮಳಿಗೆಗಳಿಗೆ ಕಾರ್ಯನಿರ್ವಹಿಸಲು ಅವಕಾಶ ಕೊಟ್ಟಿದೆ. ಆದರೆ, ಆಯುರ್ವೇದ ಅಂಗಡಿಕಾರರು ಸ್ವಯಂ ನಿರ್ಣಯ ಕೈಗೊಂಡು ಬೆಳಗ್ಗೆ 8ರಿಂದ ಮಧ್ಯಾಹ್ನ 1ರ ವರೆಗೆ ಹಾಗೂ ಕೆಲವರು ಬೆಳಗ್ಗೆ 10ರಿಂದ ಸಂಜೆ 7ರ ವರೆಗೆ ಸಮಯ ನಿಗದಿ ಮಾಡಿಕೊಂಡಿದ್ದಾರೆ.

ಜನರ ಆರೋಪ: ಕೋವಿಡ್-19 ಸಂದರ್ಭದಲ್ಲಿ ಆಯುರ್ವೇದಿಕ್ ಔಷಧ ಅಂಗಡಿಗಳು ಏಕಾಏಕಿ ಸಮಯ ನಿಗದಿ ಮಾಡಿಕೊಂಡಿರುವುದಕ್ಕೆ
ಸಾರ್ವಜನಿಕ ವಲಯದಲ್ಲಿ ನಾನಾ ರೀತಿಯ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇಂಗ್ಲಿಷ್ ಔಷಧವನ್ನೇ ಜನರು ಕೊಳ್ಳುವಂತಾಗಲು ಹಾಗೂ ಆಯರ್ವೇದ ಔಷಧ ಜನರಿಗೆ ಸಿಗದಂತೆ ಮಾಡಲು ಕೆಲವರು ಷಡ್ಯಂತ್ರ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಆದರೆ, ಇಂತಹ ಊಹಾಪೋಹಗಳನ್ನು ಅಲ್ಲಗಳೆದಿರುವ ಆಯುಷ್ ಇಲಾಖೆ ಅಧಿಕಾರಿಗಳು, ‘ಆಯುರ್ವೇದ ಔಷಧ ಮಳಿಗಳು ದಿನದ 24 ಗಂಟೆಯೂ ತೆರೆದಿಟ್ಟುಕೊಳ್ಳಬಹುದು. ಅವರಿಗೆ ಯಾವುದೇ ರೀತಿಯ ನಿರ್ಬಂಧನೆ ವಿಧಿಸಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಸಂಪರ್ಕಿಸಿದರೆ ಔಷಧ ಮುಟ್ಟಿಸುತ್ತೇವೆ

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮ ಹಾಗೂ ಗ್ರಾಹಕರ ಸಂಖ್ಯೆ ಕಡಿಮೆಯಾಗಿರುವ ಕಾರಣ ಬೆಳಗ್ಗೆ 10 ರಿಂದ ಮಧ್ಯಾಹ್ನ 1ರ ವರೆಗೆ ಹಾಗೂ ಸಂಜೆ 7 ಗಂಟೆಯವರೆಗೆ, ಇನ್ನೂ ಕೆಲವರು ದಿನಕ್ಕೆ 4 ಗಂಟೆ ಮಾತ್ರ ಔಷಧಾಲಯ ತೆರೆಯುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ 24 ಗಂಟೆ ಸೇವೆ ಸಲ್ಲಿಸಲು ನಾವೆಲ್ಲ ಸಿದ್ಧರಿದ್ದೇವೆ. ಗ್ರಾಹಕರು ಔಷಧಕ್ಕಾಗಿ ಸಂಪರ್ಕಿಸಿದರೆ ಅವರಿಗೆ ಔಷಧ ಮುಟ್ಟಿಸುವ ಕೆಲಸ ಮಾಡುತ್ತೇವೆ.
ಹರಿ ಪಾಟೀಲ ಧ್ವನಂತರಿ ಔಷಧಾಲಯ, ಬೆಳಗಾವಿ

ಜಿಲ್ಲೆಯಲ್ಲಿ ಅಲೋಪಥಿ, ಆಯುರ್ವೇದ ಔಷಧ ಮಳಿಗೆಗಳು ದಿನದ 24 ಗಂಟೆಯೂ ಸೇವೆ ಸಲ್ಲಿಸಲು ಅವಕಾಶ ಇದೆ. ಬೆಳಗಾವಿ ನಗರದಲ್ಲಿ ಆಯುರ್ವೇದಿಕ್ ಮಳಿಗೆಗಳು ಸಮಯ ನಿಗದಿ ಮಾಡಿಕೊಂಡು ಸೀಮಿತ ಅವಧಿಗೆ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.| ಡಾ. ಕೆ.ಹರೀಶಕುಮಾರ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net