ಆಯುರ್ವೇದ ಆಹಾರ ಪದ್ಧತಿ ಎಲ್ಲರೂ ಅನುಸರಿಸಿ

6
Published on

ಮೈಸೂರು: ಆಯುರ್ವೇದ ಆಹಾರ ಪದ್ಧತಿಯನ್ನು ಎಲ್ಲರೂ ಅನುಸರಿಸಬೇಕು ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕಿ ಡಾ.ದಾಕ್ಷಾಯಿಣಿ ಹೇಳಿದರು.

7ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ನಗರದ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಆಯೋಜಿಸಿದ್ದ ‘ಸಿರಿ ಸಂಭ್ರಮ’ ಸಿರಿಧಾನ್ಯಗಳ ಮಹತ್ವ ಮತ್ತು ಆರೋಗ್ಯಕ್ಕಾಗಿ ಆಯುರ್ವೇದ ಆಹಾರ ಸೂತ್ರಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಮಧ್ಯಾಹ್ನ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಂಶುಪಾಲ ಡಾ.ಗಜಾನನ ಹೆಗಡೆ, ಪ್ರತಿ ಮನೆಯಲ್ಲೂ ಆಯುರ್ವೇದ ಇದೆ. ಮೊದಲು ಮನೆಯ ಮದ್ದು ಬಳಸುತ್ತಾರೆ. ಗುಣವಾಗದಿದ್ದಾಗ ನಂತರ ವೈದ್ಯರ ಬಳಿ ಹೋಗುತ್ತಾರೆ. ಆದ್ದರಿಂದ ಆಯುರ್ವೇದ ವೈದ್ಯರು ಮೊದಲು ಈ ಪದ್ಧತಿ ಬಳಸಬೇಕು. ನಂತರ ಬೇರೆಯವರಿಗೆ ಸಲಹೆ ಮಾಡಬೇಕು ಎಂದರು.

ನಾವು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ಕೋವಿಡ್ ಸಂದರ್ಭದಲ್ಲಿ ಬಹಳಷ್ಟು ಸಾರ್ವಜನಿಕರು ಆಯುರ್ವೇದ ಆಸ್ಪತ್ರೆಯ ಸೌಲಭ್ಯ ಸದುಪಯೋಗ ಮಾಡಿಕೊಂಡರು ಎಂದರು.

ಶಾರದಾ ವಿಲಾಸ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಹನುಮಂತಾಚಾರ್ ಜೋಶಿ ಮಾತನಾಡಿ, ಆಯುರ್ವೇದ ತಾಯಿ, ಅಲೋಪತಿ ಹೆಂಡತಿ ಇದ್ದಂತೆ. ಆಯುರ್ವೇದ ವೈದ್ಯ ಪದ್ಧತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ ಎಂಬುದನ್ನು ಮರೆಯಬಾರದು. ಪ್ರತಿಯೊಬ್ಬರೂ ಆಹಾರ-ವಿಚಾರ-ವಿಹಾರ-ಚಿಕಿತ್ಸೆ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.


ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯ ನಿರ್ದೇಶಕ ಡಾ.ಲಕ್ಷ್ಮೀನಾರಾಯಣ ಶೆಣೈ, ಪತ್ರಕರ್ತರಾದ ಶ್ರೀಧರ ಆರ್.ಭಟ್ಟ, ಅಂಶಿ ಪ್ರಸನ್ನಕುಮಾರ್, ವೈದ್ಯರಾದ ಮೈತ್ರಿ, ಶಶಿರೇಖಾ, ಸಂಜಯ್‌ಕುಮಾರ್, ವಾಸುದೇವ ಚಾಟೆ, ಎಚ್.ವಿ. ನಾಗರಾಜ್ ಸುನೀತಾ ಸಿದ್ದೇಶ್ ಇದ್ದರು.

ಅಡುಗೆ ಸ್ಪರ್ಧೆ: ಸಿರಿಧಾನ್ಯ ಅಡುಗೆ ಸ್ಪರ್ಧೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಾರ್ವಜನಿಕ ವಿಭಾಗದಲ್ಲಿ ಕಲ್ಪನಾ ಅರಸ್, ಕೋಕಿಲಾ, ಯದುಗಿರಿ, ವಿದ್ಯಾರ್ಥಿಗಳ ವಿಭಾಗದಲ್ಲಿ ಶಾರದಾ, ಗಯಾನ, ವಿನಿತಾ, ಜ್ಞಾನಶ್ರೀ, ಗಂಗಾಧರ್, ವಿಶಾಲ್, ಬಹುಮಾನ ಪಡೆದರು. ಆಶಾ, ಮೇಘಾ ವಿಶೇಷ, ಮಂಜುಳಾ, ಭವಾನಿ ಸಂತೋಷ್ ಭಾಗವಹಿಸಿ ಮೆಚ್ಚುಗೆ ಬಹುಮಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net