

ಶ್ರೀರಂಗಪಟ್ಟಣ: ಪಟ್ಟಣದ ಹೊರವಲಯದ ಚಂದ್ರವನ ಆಶ್ರಮದಲ್ಲಿ ಭಾನುವಾರ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಆಯುರ್ವೇ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಯಿತು.
ಆಶ್ರಮದ ಆವರಣದಲ್ಲಿ ಆದಿ ಆರೋಗ್ಯ ಆಶ್ರಮ ಆಯುರ್ವೇದ ಆಸ್ಪತ್ರೆ ಹಾಗೂ ಮೈಸೂರಿನ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ತಪಸಣಾ ಶಿಬಿರವನ್ನು ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಉದ್ಘಾಟಿಸಿದರು.
ವಿದ್ಯಾಭ್ಯಾಸ, ಆರೋಗ್ಯ, ಅನ್ನದಾನ ಈ ಮೂರು ಸಹ ಜೀವನದಲ್ಲಿ ಪ್ರಮುಖ ಅಂಶಗಳು. ಪ್ರಸ್ತುತ ಜೀವನಶೈಲಿಯಲ್ಲಿ ಆರೋಗ್ಯ ಕಾಳಜಿ ಅತ್ಯವಶ್ಯ. ಇಂತಹ ತಪಾಸಣಾ ಶಿಬಿರಗಳ ಆಯೋಜನೆ ಅಗತ್ಯತೆ ಸಮಾಜಕ್ಕೆ ಹೆಚ್ಚಿದ್ದು, ಇದರ ಪ್ರಯೋಜನವನ್ನು ಜನರು ಪಡೆದುಕೊಳ್ಳಬೇಕು. ಪೊಲೀಸ್ ಇಲಾಖೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಹೆಚ್ಚು ಒತ್ತಡದಿಂದ ಕಾರ್ಯನಿರ್ವಹಿಸುತ್ತಾರೆ. ಮನಸ್ಸಿನ ಪ್ರಶಾಂತತೆಗೆ ಧ್ಯಾನ ಸಹಕರಿಸಲಿದ್ದು, ಎಲ್ಲರೂ ಆರೋಗ್ಯವಂತರಾಗಿರಬೇಕೆಂಬುದು ತ್ರಿನೇತ್ರ ಸ್ವಾಮೀಜಿ ಅವರ ಆಶಯವಾಗಿರುವುದು ಸ್ವಾಗತಾರ್ಹ ಎಂದು ಅವರು ಹೇಳಿದರು.
ಚಂದ್ರವನ ಮಠದ ಪೀಠಾಧಿಪತಿ ಶ್ರೀ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿ ಆಶೀರ್ವಚನ ನೀಡಿ, ವೈದ್ಯಕೀಯ ಕ್ಷೇತ್ರ ಸೇವೆಯ ಕ್ಷೇತ್ರವಾಗಿದ್ದು, ಮಾನವನಿಗೆ ಭರವಸೆಯ ಚಿಕಿತ್ಸೆಯೊಂದಿಗೆ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿ ಬದುಕಿಸುವ ಕರ್ತವ್ಯವಾಗಿದೆ. ಶಿಕ್ಷಣ ಮತ್ತು ವೈದ್ಯಕೀಯ ಇವರೆಡು ಕ್ಷೇತ್ರಗಳು ಪ್ರಾಮಾಣಿಕವಾಗಿದ್ದು, ಉತ್ತಮ ವಿದ್ಯಾರ್ಥಿಗಳು ಈ ಸೇವಾ ಕ್ಷೇತ್ರಕ್ಕೆ ಕಾಲಿಟ್ಟಾಗ ಮಾತ್ರ ದೇಶದ ಅಭ್ಯುದಯವಾಗಲಿದೆ ಎಂದು ತಿಳಿಸಿದರು.
ಮೈಸೂರಿನ ಅನ್ನಪೂರ್ಣ ಕಣ್ಣಿನ ಆಸ್ಪತ್ರೆ, ಗೋಪಾಲಗೌಡ ಆಸ್ಪತ್ರೆ, ಭಾರತ್ ಕ್ಯಾನ್ಸರ್ ಆಸ್ಪತ್ರೆ, ಶ್ರೀರಕ್ಷ ಆಯುರ್ವೇದ ಆಸ್ಪತ್ರೆ, ಶ್ರೀ ಆಯುರ್ವೇದ, ವಂದೇ ವೆಲ್‌ನೆಸ್ ಆಯುರ್ವೇದ ಸೆಂಟರ್, ನಂಜನಗೂಡು ಬಿ.ವಿ.ಪಂಡಿತ್ ಆಸ್ಪತ್ರೆ, ಸರ್ಕಾರಿ ಆಯುರ್ವೇದ ಕಾಲೇಜುಗಳ ವೈದ್ಯ ತಂಡಗಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದು, ರೋಗಿಗಳಿಗೆ ಉಚಿತ ರಕ್ತ ಪರೀಕ್ಷೆ, ಹೃದ್ರೋಗ ತಪಾಸಣೆ, ನೇತ್ರ ತಪಾಸಣೆ ಮತ್ತು ನುರಿತ ಆಯುರ್ವೇದ ತಜ್ಞ ವೈದ್ಯರಿಂದ ತಪಾಸಣೆ ಮತ್ತು ಸಲಹೆ ಜತೆಗೆ ಉಚಿತವಾಗಿ ಔಷಧ ವಿತರಿಸಲಾಯಿತು. 200ಕ್ಕೂ ಹೆಚ್ಚು ಜನರು ಶಿಬಿರದ ಸದುಪಯೋಗ ಪಡೆದುಕೊಂಡರು.
ಆದಿ ಆರೋಗ್ಯ ಆಶ್ರಮ ಆಯುರ್ವೇದ ಆಸ್ಪತ್ರೆಯ ಕಾರ್ಯಕಾರಿ ನಿರ್ದೇಶಕ ಡಾ.ಎನ್.ನಾಗೇಶ್, ಗೋಪಾಲಗೌಡ ಆಸ್ಪತ್ರೆಯ ನರರೋಗ ತಜ್ಞ ಡಾ.ಶುಶ್ರುತ್‌ಗೌಡ, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಬಿ.ಲಕ್ಷ್ಮೀನಾರಾಯಣ ಶೆಣೈ, ಮಠದ ಕಾರ್ಯದರ್ಶಿ ಟಿ.ಪಿ.ಶಿವಕುಮಾರ್, ಶೇಖರ್ ಕುಂಬಾರ್, ಕೆ.ಗಂಗಣ್ಣ ಇತರರು ಇದ್ದರು.