

ತುಮಕೂರು: ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ಆಡಳಿತಾರೂಢ ಹಾಗೂ ಪ್ರತಿಪಕ್ಷದ ಸದಸ್ಯರು ಸಿಡಿದೆದ್ದಿದ್ದಾರೆ.
ರಾಜ್ಯ ಸರ್ಕಾರವು ಕರೊನಾಘಾತದಿಂದ ತತ್ತರಿಸಿರುವ ಜನತೆಗೆ ಆಸ್ತಿ ತೆರಿಗೆ ಪಾವತಿಸಲು ಜುಲೈ ಅಂತ್ಯದವರೆಗೆ ಶೇ.5 ರಿಯಾಯಿತಿಯನ್ನು ನೀಡಿ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಳ್ಳಲು ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮೇಯರ್ ಫರಿದಾಬೇಗಂ ಸೇರಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಆಯುಕ್ತ ಟಿ.ಭೂಬಾಲನ್ ವಿರುದ್ಧ ಆಕ್ರೋಶ ಹೊರಹಾಕಿದರು.
ಸ್ಮಾರ್ಟ್‌ಸಿಟಿ ಜವಾಬ್ದಾರಿ ಹೊತ್ತುಕೊಂಡಿರುವ ಆಯುಕ್ತ ಟಿ.ಭೂಬಾಲನ್ ಪಾಲಿಕೆಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಇದರಿಂದಾಗಿ ಕೆಳಹಂತದ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ, ನಗರದ ಅಭಿವೃದ್ಧಿಯನ್ನೇ ಮರೆತು ಹೋಗಿದ್ದಾರೆ. ಕಾರ್ಪೋರೇಟರ್‌ಗಳ ಕೈಗೆ ಆಯುಕ್ತರು ಸಿಗುತ್ತಿಲ್ಲ. ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಆಡಳಿತ ನಿರ್ವಹಿಸುವುದಾದರೂ ಹೇಗೆ ಎಂದು ಫರಿದಾಬೇಗಂ ತೀವ್ರ ಅಸಮಾಧಾನಾ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಸದಸ್ಯ ಜೆ.ಕುಮಾರ್, ಬೆಳಗಾವಿಗೆ ಹೋಗಿಬರುವ ಮುನ್ನ ಆಯುಕ್ತರು ಉತ್ತಮವಾಗಿ ಕೆಲಸ ಮಾಡುತ್ತಿದ್ದರು. ಈಗ ಬದಲಾಗಿದ್ದಾರೆ. ಕೆಳವರ್ಗದ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ. ಸಮಸ್ಯೆ ಹೇಳಿದರೂ ಫೋನ್ ರಿಸೀವ್ ಮಾಡಬೇಕೆಂಬ ಕಾನೂನು ಇಲ್ಲ ಎನ್ನುತ್ತಾರೆ ಎಂದು ದೂರಿದರು. ಇದಕ್ಕೆ ಉಪಮೇಯರ್ ಶಶಿಕಲಾ, ಸ್ಥಾಯಿಸಮಿತಿ ಅಧ್ಯಕ್ಷರಾದ ಎಚ್.ಮಲ್ಲಿಕಾರ್ಜುನಯ್ಯ, ಮಹೇಶ್, ಪಕ್ಷೇತರ ಸದಸ್ಯ ವಿಷ್ಣುವರ್ಧನ್ ಸಹ ಧ್ವನಿಗೂಡಿಸಿದರು.
ತೆರಿಗೆ ಹೆಚ್ಚಳ ಮುಂದೂಡಲು ಮನವಿ: ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಗೆ ಮೇ ಅಂತ್ಯದವರೆಗೆ ಶೇ.5 ರಿಯಾಯಿತಿ ನೀಡಿ ಅವಕಾಶ ನೀಡಲಾಗಿತ್ತು, ಈಗ ಅದನ್ನು ಜುಲೈ ಅಂತ್ಯದವರೆಗೆ ತೆರಿಗೆ ಪಾವತಿಗೆ ಅವಕಾಶ ನೀಡಿದ್ದು, ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು. ಪ್ರತಿ 3 ವರ್ಷಕ್ಕೆ ಆಸ್ತಿ ತೆರಿಗೆ ಹೆಚ್ಚಳವಾಗಬೇಕಿದ್ದು, ಅದರಂತೆ ಸ್ಥಾಯಿ ಸಮಿತಿ ಅಧ್ಯಕ್ಷರೊಂದಿಗೆ ಚರ್ಚಿಸಿ ಹೆಚ್ಚಳ ಮಾಡಲು ಒಪ್ಪಿಕೊಂಡಿದ್ದೇವೆ. ಕರೊನಾ ಹಿನ್ನೆಲೆಯಲ್ಲಿ ಶೇ.15 ತೆರಿಗೆ ಹೆಚ್ಚಳವನ್ನು ಮುಂದೂಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ಸರ್ಕಾರದ ನಿರ್ಧಾರದ ಮೇಲೆ ಆದೇಶ ಪಾಲನೆ ಮಾಡಲಾಗುವುದು.