ಆಯಿಷ್‌ನಿಂದ ದೋಷವುಳ್ಳ ಮಕ್ಕಳು, ತಾಯಂದಿರಿಗೆ ತರಬೇತಿ

mysore
Published on

ಮೈಸೂರು: ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ(ಆಯಿಷ್) ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳು ಹಾಗೂ ಅವರ ತಾಯಂದಿರಿಗೆ ತರಬೇತಿ ಕೊಡಿಸಲಾಗುವುದು ಎಂದು ವಿಕಲಚೇತನ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಜಂಟಿ ನಿರ್ದೇಶಕ ಎಸ್.ನಾಗರಾಜ್ ತಿಳಿಸಿದರು.

ನಗರದ ಆಯಿಷ್‌ನಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಅಂಗವಿಕಲ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹುಟ್ಟಿನಿಂದಲೇ ಈ ಸಮಸ್ಯೆಯಿಂದ ಬಹಳಷ್ಟು ಮಕ್ಕಳ ಬಳಲುತ್ತಿದ್ದಾರೆ.

ಪ್ರಾರಂಭಿಕ ಹಂತದಲ್ಲೇ ಇಂತಹ ಮಕ್ಕಳ ಸಮಸ್ಯೆ ಮತ್ತು ಅದಕ್ಕೆ ಪರಿಹಾರದ ಕುರಿತು ಅರಿವು ಮೂಡಿಸಬೇಕಿದೆ. ಅದಕ್ಕಾಗಿ ನಮ್ಮ ಇಲಾಖೆಯಿಂದಲೇ ತರಬೇತಿ ಕೊಡಲಾಗುವುದು. ಅಕ್ಟೋಬರ್‌ನಲ್ಲಿ ಈ ಕುರಿತು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.

ಸಮಾಜದಲ್ಲಿ ಅಂಗವಿಕಲರು ಪ್ರತ್ಯೇಕ ಎಂಬ ಭಾವನೆ ಈಗಲೂ ನೆಲೆಯೂರಿದೆ. ಇದು ತಪ್ಪು. ಅವರು ಪ್ರತ್ಯೇಕವಲ್ಲ. ಅವರೂ ಸಮಾಜದಲ್ಲಿ ಒಬ್ಬರು. ಸಮಾನ ಅವಕಾಶ, ಸೌಲಭ್ಯ ಕಲ್ಪಿಸಿಕೊಟ್ಟರೆ ಸಾಮಾನ್ಯರಿಗಿಂತ ಕಡಿಮೆ ಇಲ್ಲ ಎಂಬದನ್ನು ಸಾಬೀತುಪಡಿಸಿದ್ದಾರೆ ಎಂದರು.

ಪಾಲಕರ ಕಾಳಜಿ, ಜವಾಬ್ದಾರಿಯಿಂದ ವಿಶೇಷ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ತರಬಹುದು ಎಂಬುದು ಸಹ ಈಗಾಗಲೇ ರುಜುವಾತಾಗಿದೆ. ಇಂತಹ ಪಾಲಕರು ಇತರರಿಗೆ ಮಾದರಿ. ಇವರೆಲ್ಲ ತಾಗ್ಯಮಯಿಗಳು. ಮಗುವಿನೊಂದಿಗೆ ತರಬೇತಿ ಪಡೆದು ಥೆರಫಿ, ನಿರ್ವಹಣೆ ಕಲಿತುಕೊಳ್ಳುತ್ತಾರೆ. ಇದರ ಫಲವಾಗಿ ಈ ಮಕ್ಕಳು ಇತರರಂತೆ ಬದುಕಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದರು.

ಮೂಢನಂಬಿಕೆಯಿಂದ ಅಂಗವಿಕಲ ಮಕ್ಕಳನ್ನು ತಾತ್ಸಾರದಿಂದ ನೋಡಲಾಗುತ್ತದೆ. ಮಾಟ, ಮಂತ್ರದ ಮೊರೆ ಸಹ ಹೋಗಲಾಗುತ್ತದೆ. ಇದು ಫಲ ಕೊಡಲ್ಲ. ಬದಲಿಗೆ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ವೈಜ್ಞಾನಿಕ ಚಿಕಿತ್ಸೆ, ತರಬೇತಿಯಿಂದ ಮಾತ್ರ ಅಂಗವಿಕಲರ ಸಮಸ್ಯೆ ನಿವಾರಿಸಬಹುದಾಗಿದೆ ಎಂದರು.

ಮಗು 4-5 ವರ್ಷದಲ್ಲಿರುವಾಗಲೇ ಅಂಗವೈಕಲ್ಯ ಗುರುತಿಸಿ, ಅದಕ್ಕೆ ಚಿಕಿತ್ಸೆ ಕೊಡಿಸಿದಾಗ ಸರಿಪಡಿಸಲು ಸಾಧ್ಯವಿದೆ. ವಯಸ್ಸಾದ ಬಳಿಕ ಚಿಕಿತ್ಸೆ ಹೆಚ್ಚಿನ ಪರಿಣಾಮಕಾರಿ ಆಗಲ್ಲ. ಆದ್ದರಿಂದ ವಿಶೇಷ ಮಕ್ಕಳನ್ನು ಜಿಲ್ಲಾ, ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲು ತೋರಿಸಿ ಬಳಿಕ ಆಯಿಷ್‌ಗೆ ಕರೆದುಕೊಂಡುಬರಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, ಅಂಗವಿಕಲ ಮಕ್ಕಳು ಸಹ ಸಮಾಜ ಮುಖ್ಯವಾಹಿನಿಗೆ ಬರಬೇಕು. ಸ್ವಾವಲಂಬನೆ ಮತ್ತು ಸ್ವಾತಂತ್ರೃ ಬದುಕು ಕಟ್ಟಿಕೊಳ್ಳಬೇಕು ಎಂದರು.

ಆಯಿಷ್‌ನಲ್ಲಿ ಚಿಕಿತ್ಸೆ ಪಡೆದು ಸಾಧನೆ ಮಾಡಿದ ಪಿ.ಆರ್.ಮೊಹಮ್ಮದ್ ಸುಹೈಲ್, ಮಹಮ್ಮದ್ ಉನೈಸ್, ಅಮೋಘ್ ಕಶ್ಯಪ್, ಧೀಮೋಂತ್, ಜೆ.ಪೂರ್ಣಿಮಾ ಅವರಿಗೆ ಸಾಧಕ ಪ್ರಶಸ್ತಿ ಮತ್ತು ರೇಣುಕಾ, ಶಫೀಕ್ ಅಲಿ, ಅಲ್ಲಿ ಸೈಮನ್, ಗಗನಾ ಅರಸ್, ಎಂ.ನಾಗರಾಜ್ ಅವರಿಗೆ ವರ್ಷದ ಉತ್ತಮ ತಾಯಂದಿರ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಆಯಿಷ್ ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net