

ಮೈಸೂರು: ಆಯಿಷ್‌ಗೆ ಮೈಸೂರು ತಾಲೂಕಿನ ವರುಣದಲ್ಲಿ 10 ಎಕರೆ ಜಾಗವನ್ನು ಉಚಿತವಾಗಿ ನೀಡಲಾಗಿದ್ದು, ಇದರಿಂದ ಅದರ ಕ್ಲಿನಿಕಲ್ ಮತ್ತು ಪುನರ್ವಸತಿ ಕಾರ್ಯವನ್ನು ಇನ್ನಷ್ಟು ವಿಸ್ತರಿಸಲು ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ವಾಕ್ ಮತ್ತು ಶ್ರವಣ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮತ್ತು ಪ್ರಗತಿ ಕಾಣಬೇಕಾಗಿದೆ.
ಇದರಲ್ಲಿ ಕೆಲಸ ಮಾಡುತ್ತಿರುವ ಈ ಸಂಸ್ಥೆಗೆ ಜಾಗ ಸರ್ಕಾರ ಒದಗಿಸಿದೆ. ಈ ಸಂಸ್ಥೆಯ ಹೊರವಲಯ ಸೇವಾ ಕೇಂದ್ರಗಳು ಮತ್ತು ನವಜಾತ ಶಿಶು ತಪಾಸಣೆ ಘಟಕಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸ್ಥಳಾವಕಾಶ ಒದಗಿಸುತ್ತಿದೆ. ಇಷ್ಟಲ್ಲದೆ ಅಗತ್ಯ ಇರುವ ಎಲ್ಲ ನೆರವನ್ನೂ ಒದಗಿಸಲು ಸಿದ್ಧ ಎಂದರು.
ಮನುಷ್ಯರಿಗೆ ದೇಹದ ಎಲ್ಲ ಅಂಗಗಳು ಮುಖ್ಯವಾದರೂ ಕಣ್ಣು, ಕಿವಿಗಳು ಅತಿ ಮುಖ್ಯವಾದ ಅಂಗ. ದೃಷ್ಟಿ ಮತ್ತು ಶಬ್ದಗಳ ಗ್ರಹಿಕೆಯು ಮನುಷ್ಯರ ಮಾತುಗಳನ್ನು ರೂಪಿಸುತ್ತವೆ. ಜತೆಗೆ, ನಿಯಂತ್ರಿಸುತ್ತವೆ. 2011ರ ರಾಷ್ಟ್ರೀಯ ಜನಗಣತಿಯ ಪ್ರಕಾರ ರಾಜ್ಯದಲ್ಲಿ 3.3 ಲಕ್ಷ ಜನರು ಮಾತು ಬಾರದವರು ಹಾಗೂ ಕಿವಿ ಕೇಳಿಸದವರಿದ್ದಾರೆ.
ಶೇ.0.5ರಷ್ಟಿರುವ ಈ ಅಸಹಾಯಕರು ನಮಗೆ ಅಂಕಿ ಸಂಖ್ಯೆಗಳಲ್ಲ, ಜೀವಂತ ಮನುಷ್ಯರ ನಿರಂತರ ಕಷ್ಟದ ಉದಾಹರಣೆಗಳು. ಹೀಗಾಗಿ ಈ ಸಮಸ್ಯೆ ಇರುವವರನ್ನು ಎಚ್ಚರಿಕೆಯಿಂದ ಆರೈಕೆ ಮಾಡಬೇಕಿದೆ. ಇದು ನಾಗರಿಕ ಸಮಾಜದ ಹಾಗೂ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
ಕಿವಿಕೇಳದಿದ್ದರೆ ಇನ್ನೊಬ್ಬರನ್ನು ಅರ್ಥ ಮಾಡಿಕೊಂಡು ಜೀವನ ಸಾಗಿಸುವುದು ಕಷ್ಟಕರ. ಆದ್ದರಿಂದ ಹೊಟ್ಟೆಯಲ್ಲಿರುವಾಗಲೇ ಮಗುವಿನ ವಾಕ್ ಮತ್ತು ಶ್ರವಣ ಸಮಸ್ಯೆಯನ್ನು ಪತ್ತೆ ಹಚ್ಚಬೇಕು. ಇದು ಆಯಿಷ್‌ನಂತಹ ಸಂಸ್ಥೆಯಿಂದ ಮಾತ್ರ ಸಾಧ್ಯವಾಗಿದೆ ಎಂದರು.
ಆಯಿಷ್ ಸಂಸ್ಥೆಯು ವಾಕ್ ಮತ್ತು ಶ್ರವಣ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿರುವ ಏಷ್ಯಾದ ಅತ್ಯುತ್ತಮ ಸಂಸ್ಥೆಗಳಲ್ಲೊಂದಾಗಿರುವುದು ನಮ್ಮ ಜಿಲ್ಲೆ ಮತ್ತು ರಾಜ್ಯದ ಹೆಮ್ಮೆ. ಧ್ವನಿ ಇಲ್ಲದವರಿಗೆ ಧ್ವನಿಯಾಗಿರುವ, ಕಿವಿ ಕೇಳದೆ ಮೌನವಾಗಿರುವವರಿಗೆ ಮಾತಿನ ಚೈತನ್ಯ ತುಂಬಿರುವ ಇಂತಹ ಸಂಸ್ಥೆಯು ಮೈಸೂರಿನಲ್ಲಿರುವುದು ಹಿರಿಮೆಯ ಸಂಗತಿ ಎಂದರು.
ಸಮಾರಂಭದಲ್ಲಿ ಆಯಿಷ್ ಅಂಚೆ ಚೀಟಿಯನ್ನು ರಾಷ್ಟ್ರಪತಿ ಅವರು ಬಿಡುಗಡೆಗೊಳಿಸಿದರು. ಜತೆಗೆ ಆಯಿಷ್ ಕೈಪಿಡಿ, ವಜ್ರಮಹೋತ್ಸವದ ಲಾಂಛನ ಅನಾವರಣಗೊಳಿಸಲಾಯಿತು.
ಕೇಂದ್ರದ ಆರೋಗ್ಯ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಆಯಿಷ್ ನಿರ್ದೇಶಕಿ ಡಾ.ಎಂ.ಪುಷ್ಪಾವತಿ ಇದ್ದರು.
ನನಗೆ ಕಿವಿ ಸಮಸ್ಯೆ ಇತ್ತು. ತೋರಿಸಲು ಆಯಿಷ್‌ಗೆ ಒಮ್ಮೆ ಬಂದಿದ್ದೆ. ಇಲ್ಲಿಯವರು ಚಿಕಿತ್ಸೆ ಕೊಟ್ಟರು. ತೊಂದರೆ ಇದ್ದರೆ ಮತ್ತೆ ಬನ್ನಿ ಎಂದೂ ಹೇಳಿದ್ದರು. ಆದರೆ ನನಗೆ ಸಮಸ್ಯೆ ಮತ್ತೆ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ, ಇಲ್ಲಿಗೆ ಬರುವ ಪ್ರಮೇಯ ಬರಲಿಲ್ಲ ಎಂದು ಸಿಎಂ ಹೇಳಿದರು.
‘ಶ್ರವಣ ದೋಷ ಮುಕ್ತ ಕರ್ನಾಟಕ’ ನಿರ್ಮಾಣ ಮಾಡುವ ಸಂಕಲ್ಪ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಶ್ರವಣದೋಷ ಶಸ್ತ್ರ ಚಿಕಿತ್ಸೆಯಲ್ಲಿ(ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ) ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಶ್ರವಣ ಸಂಜೀವಿನಿ ಯೋಜನೆಯಡಿ ಆರ್ಥಿಕವಾಗಿ ದುರ್ಬಲ ವರ್ಗದ ಮಕ್ಕಳಿಗೆ ದುಬಾರಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಉಚಿತವಾಗಿ ಒದಗಿಸಲು 32 ಕೋಟಿ ರೂ. ಮೀಸಲಿಟ್ಟಿದೆ ಎಂದರು.
ವಾಕ್ ಮತ್ತು ಶ್ರವಣ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಸವಾಲುಗಳು ಮತ್ತು ಅವಕಾಶಗಳು ಒಟ್ಟೊಟ್ಟಿಗೆ ಎದುರಾಗುತ್ತಿವೆ. ಇದಕ್ಕೆ ಸಜ್ಜಾಗಬೇಕು. ಅದಕ್ಕಾಗಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಕೆ ಮಾಡಿಕೊಳ್ಳಬೇಕಿದೆ. ಇದರೊಂದಿಗೆ ಡಿಜಿಟಲ್ ಥೆರಪಿ, ಟೆಲಿ-ಮೌಲ್ಯಮಾಪನ ಮತ್ತು ಟೆಲಿ-ಪುನರ್ವಸತಿಯಲ್ಲಿ ಕೆಲಸ ಮಾಡಬೇಕಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್‌ತಿಳಿಸಿದರು.
ವಾಕ್, ಶ್ರವಣ ಸಮಸ್ಯೆಯಿಂದ ಬಳಲುತ್ತಿವವರು ಸೇರಿದಂತೆ ಅಂಗವಿಕಲರನ್ನು ಸಶಕ್ತಗೊಳಿಸಬೇಕು. ಅದಕ್ಕಾಗಿ ವಿಶೇಷ ಉಪಕ್ರಮಗಳನ್ನು ಇನ್ನಷ್ಟು ರೂಪಿಸಬೇಕಿದೆ ಎಂದರು.
ಸಂಕೇತ ಭಾಷೆಗೆ ಹೆಚ್ಚಿನ ಮಾನ್ಯತೆ ಕಲ್ಪಿಸಿಕೊಡಬೇಕಿದೆ. ಅದು ಸಮಾಜದಲ್ಲಿ ಎಲ್ಲೆಡೆ ಬಳಕೆ ಅವಕಾಶ ಒದಗಿಸಬೇಕು. ಈ ನಿಟ್ಟಿನಲ್ಲಿ ಆಯಿಷ್ ಕೆಲಸ ಮಾಡಬೇಕಿದೆ ಎಂದರು.