ಆಯವ್ಯಯ ಪೂರ್ವಭಾವಿ ಸಭೆ ಮುಂದೂಡಿಕೆ

7kglphoto5..
Published on

ಕೊಳ್ಳೇಗಾಲ: ನಗರಸಭೆ ಅಧ್ಯಕ್ಷೆ ರೇಖಾ ರಮೇಶ್ ಅಧ್ಯಕ್ಷತೆಯಲ್ಲಿ ಶನಿವಾರ ಕರೆಯಲಾಗಿದ್ದ 2023-24 ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಯಿತು.

ಸದಸ್ಯರಾದ ಜಯಮೇರಿ, ಕವಿತಾ, ಆಯುಕ್ತ ನಂಜುಂಡಸ್ವಾಮಿ, ಇಂಜಿನಿಯರ್‌ಗಳಾದ ನಾಗೇಂದ್ರ, ಪ್ರಸನ್ನ, ಮೇಲ್ವಿಚಾರಕ ಹನುಮಂತ, ಸಂಘಟನಾ ಅಧಿಕಾರಿ ಪರಶಿವಮೂರ್ತಿ ಇತರ ಬೆರಳಷ್ಟು ಅಧಿಕಾರಿಗಳು ಹಾಗೂ ಬೆರಳೆಣಿಕೆಯಷ್ಟು ಸಾರ್ವಜನಿಕರು ಹಾಜರಿದ್ದರು.

ನಗರಸಭೆ ಆಯುಕ್ತ ನಂಜುಂಡಸ್ವಾಮಿ ಆಯವ್ಯಯ ಪೂರ್ವಭಾವಿ ಸಭೆ ಆರಂಭ ಮಾಡಲು ಮುಂದಾದರು. ಈ ವೇಳೆ ಇಂಜಿನಿಯರ್ ಪ್ರಸನ್ನ ಸಭೆಯ ಮಾಹಿತಿಯನ್ನು ಹೇಳುತ್ತಿದಂತೆ, ಸಭೆಯಲ್ಲಿ ಇಬ್ಬರು ಸದಸ್ಯರು ಹಾಜರಿದ್ದು ಹೆಚ್ವಿನ ಸಂಖ್ಯೆಯಲ್ಲಿ ಸಾರ್ವಜನಿಕರು ಇಲ್ಲ. ಹೀಗಿರುವಾಗ ಹೇಗೆ ಸಭೆ ಮಾಡುತ್ತೀರಿ ಎಂದು ಪತ್ರಕರ್ತರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ನಡೆಸುವ ಯಾವುದೇ ಸಭೆಗಳು ಜನರಿಗೆ ತಿಳಿಯುತ್ತಿಲ್ಲ. ಇಂತಹ ಮಹತ್ವದ ಸಭೆಯನ್ನು ಕಾಟಾಚಾರಕ್ಕೆ ಮಾಡುವ ಬದಲು ಸಾರ್ವಜನಿಕರಿಗೆ ಮಾಹಿತಿ ನೀಡಿ ಸಭೆ ಮಾಡಿ ಎಂದು ತಿಳಿಸಿದರು. ತಕ್ಷಣ ಎಚ್ಚೆತ್ತ ನಂಜುಂಡಸ್ವಾಮಿ, ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬಾರದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗುತ್ತಿದೆ. ಸಭೆಗೆ ದಿನ ಗುರುತಿಸಿ ಪ್ರಕಟಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net