

ಚಾಮರಾಜನಗರ: ನಗರಸಭೆಯಲ್ಲಿ ಅಧಿಕಾರಿಗಳ ಆಡಳಿತ ವೈಲ್ಯ ಆಯವ್ಯಯ ಮಂಡನೆ ಸಭೆಯನ್ನು ಆರಂಭವನ್ನೇ ಆಯ ತಪ್ಪಿಸಿತು. ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವೈಖರಿ ವಿರುದ್ಧ ಸದಸ್ಯರ ಅಸಮಾಧಾನ ಸ್ಪೋಟಗೊಂಡಿತು. ಸಮಸ್ಯೆಗಳನ್ನು ಬಗೆಹರಿಸದೆ ಇರುವುದಕ್ಕೆ ಉತ್ತರ ಕೊಡಿ, ಬಳಿಕ ಬಜೆಟ್ ಮಂಡಿಸಿ ಎಂಬ ಷರತ್ತಿನೊಂದಿಗೆ ಚರ್ಚೆ ಕಾವೇರಿತು.
ಚಾಮರಾಜನಗರ ನಗರಸಭೆ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷ ಸುರೇಶ್ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ 2024-25ನೇ ಸಾಲಿನ ಪರಿಷ್ಕೃತ ಹಾಗೂ 2025-26ನೇ ಸಾಲಿನ ಅಂದಾಜು ಆಯವ್ಯಯ ಮಂಡನೆ ಸಭೆಯಲ್ಲಿ ಸಾರ್ವಜನಿಕರ ಕೆಲಸ ಮಾಡಿಕೊಡದೆ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ವಿರುದ್ಧ ಸದಸ್ಯರ ತಾಳ್ಮೆಯ ಕಟ್ಟೆಯೊಡೆಯಿತು.
ನಗರಸಭೆ ಸದಸ್ಯ ಅಮಿಕ್ ಮಾತನಾಡಿ, ನಗರದಲ್ಲಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿಯಾಗುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಂತೆಯೇ ಮತ್ತೋರ್ವ ಸದಸ್ಯೆ ತೌಸಿಯಾಬಾನು ನಮ್ಮ ವಾರ್ಡ್‌ಗೆ ಕಸ ಸಂಗ್ರಹದ ಆಟೋ ಬರುತ್ತಿಲ್ಲ ಎಂದು ದೂರಿದರು. ಸದಸ್ಯ ಮಹೇಶ್ ಗಾಳೀಪುರ ಮಾತನಾಡಿ, ಸಾರ್ವಜನಿಕರು ಮರಣ ಪ್ರಮಾಣ ಪತ್ರ ಪಡೆಯಲು ತಿಂಗಳುಗಟ್ಟಲೆ ಅಲೆಯುತ್ತಿದ್ದಾರೆ. ಆರೋಗ್ಯ ನಿರೀಕ್ಷಕರಲ್ಲಿ ಸಮನ್ವಯತೆ ಇಲ್ಲ. ಮಂಜು ಮತ್ತು ಪುಷ್ಪಾ ಅವರ ಕಿತ್ತಾಟದಲ್ಲಿ ಚಾ.ನಗರ ಬಡವಾಗುತ್ತಿದೆ. ಕೆಲವರು ಪ್ರತಿದಿನ ಮುಂಜಾನೆ ಕರ್ತವ್ಯಕ್ಕೆ ಬರುತ್ತಿಲ್ಲ. ಬೇಕಿದ್ದರೆ ಹಾಜರಾತಿ ಪರಿಶೀಲಿಸಿ ಎಂದರು.
ಸದಸ್ಯ ಅಮಿಕ್ ಮಾತನಾಡಿ, ಪೌರಾಯುಕ್ತ ರಾಮದಾಸ್ ಹೊರಗಿನವರು. ನಾಳೆ ಇಲ್ಲಿಂದ ಬೇರೆ ಕಡೆಗೆ ಹೋಗುತ್ತಾರೆ. ಆದರೆ ಅಧ್ಯಕ್ಷ ಸುರೇಶ್ ಇಲ್ಲಿನವರು. ಸಾಕಷ್ಟು ಖರ್ಚು ಮಾಡಿ ಅಧ್ಯಕ್ಷಗಾದಿ ಹಿಡಿಯಲಾಗಿದೆ. ಆದರೆ ಅಧಿಕಾರಕ್ಕೆ ಬಂದ ಮೇಲೆ ಯಾಕೆ ಕೆಲಸ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಸದಸ್ಯ ಚಂದ್ರಶೇಖರ್ ಮಾತನಾಡಿ, ಅಧಿಕಾರಿಗಳು ಕೆಲಸ ಮಾಡದೆ ನಮ್ಮ ಪಕ್ಷಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸದಸ್ಯ ಶಿವರಾಜು ಮಾತನಾಡಿ, ಎಷ್ಟೇ ಕರೆ ಮಾಡಿದರೂ ಅಧಿಕಾರಿಗಳು ಕರೆ ಸ್ವೀಕಾರ ಮಾಡುತ್ತಿಲ್ಲ. ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹರಿಹಾಯ್ದರು. ನಾಮ ನಿರ್ದೇಶಿತ ಸದಸ್ಯ ನಾಗರಾಜು ಮಾತನಾಡಿ, ಅಧಿಕಾರಿಗಳಲ್ಲಿ ಹೊಂದಾಣಿಕೆ ಇಲ್ಲ. ಎಲ್ಲರನ್ನೂ ಸಾಮೂಹಿಕ ವರ್ಗಾವಣೆ ಮಾಡಿಸಬೇಕೆಂದು ಕಿಡಿಕಾರಿದರು. ಸದಸ್ಯ ಸುದರ್ಶನ್ ಮಾತನಾಡಿ, ಆಡಳಿತ ವರ್ಗ ಪೂರ್ತಿ ಕೆಟ್ಟಿದೆ. ನಮ್ಮ ಸಲಹೆಗಳನ್ನು ಸ್ವೀಕಾರ ಮಾಡುತ್ತಿಲ್ಲ. ಜನಸಾಮಾನ್ಯರ ಕೆಲಸಗಳಾಗುತ್ತಿಲ್ಲ ಎಂದು ದೂರಿದರು. ಅಧ್ಯಕ್ಷ ಸುರೇಶ್ ಮಾತನಾಡಿ, ದೂರು ಕೇಳಿಬರುವವರ ವಿರುದ್ಧ ಕ್ರಮವಹಿಸಲು ತಿಳಿಸಿರುವುದಾಗಿ ಹೇಳಿದರು. ಸಭೆಯಲ್ಲಿ ಉಪಾಧ್ಯಕ್ಷೆ ಮಮತಾ ಮತ್ತು ಸದಸ್ಯರು, ಅಧಿಕಾರಿಗಳು ಹಾಜರಿದ್ದರು.
ಜಿಲ್ಲಾಧಿಕಾರಿಗಳಿಗೆ ಪತ್ರ:
ನಗರದಲ್ಲಿ ಮೂಲಸೌಕರ್ಯಗಳಿಗೆ ಭಿಕ್ಷೆ ಬೇಡುವಂತಾಗಿದೆ. ನಾವೇನು ಕಾಮಗಾರಿ ಕೊಡಿ ಎಂದು ಕೇಳುತ್ತಿಲ್ಲ. ವಾರ್ಡ್‌ಗಳನ್ನು ಸ್ವಚ್ಛತೆ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇವೆ. ಕೆಲಸ ಮಾಡದ ಅಧಿಕಾರಿಗಳಿಗೆ ನೋಟೀಸ್ ನೀಡಿ ಎಂದು ಒತ್ತಾಯಿಸಿದರು. ಇದಕ್ಕೆ ಪೌರಾಯುಕ್ತ ರಾಮದಾಸ್ ಪ್ರತಿಕ್ರಿಯಿಸಿ, ಈಗಾಗಲೇ ಹಲವು ಸಲ ನೋಟೀಸ್ ನೀಡಿದ್ದೇನೆ. ಈಗ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತೇನೆ ಎಂದು ಒಪ್ಪಿಕೊಂಡರು. ಸದಸ್ಯ ಮಹೇಶ್ ಗಾಳೀಪುರ ಮಾತನಾಡಿ, ನಗರಸಭೆಯಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಇಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿ ಇಷ್ಟ ಬಂದಾಗ ಬರುತ್ತಾರೆ. ಹೊರಗೆ ಹೋದಾಗ ದಿನವಹಿಯಲ್ಲಿ ಸಹಿ ಮಾಡುತ್ತಿದ್ದರೆ ತರಿಸಿ ಎಂದರು. ಪೌರಾಯುಕ್ತ ಚಲನವಲನ ಪುಸ್ತಕ ಇದೆ. ತರಿಸುತ್ತೇನೆ ಎಂದರು. ಸದಸ್ಯೆ ನೀಲಮ್ಮ ಮಾತನಾಡಿ, ಸೋಮವಾರಪೇಟೆಯಲ್ಲಿ ಯುಜಿಡಿ, ಚರಂಡಿಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಈ ಸಮಸ್ಯೆ ಬಗೆಹರಿಸಿಲ್ಲ ಎಂದು ಹೇಳಿದರು.
ಕುಡಿಯೋಕೆ ನೀರು ಕೊಡ್ರಿ..
ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿರುವುದ ವಿರುದ್ಧ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸದಸ್ಯೆ ಕುಮುದಾ ಕೇಶವಮೂರ್ತಿ ಮಾತನಾಡಿ, ವಾರ್ಡ್‌ಗಳಲ್ಲಿ ನೀರು ಬರುತ್ತಿಲ್ಲ. ವಾಟರ್‌ಮ್ಯಾನ್ ಕರೆ ಸ್ವೀಕಾರ ಮಾಡುತ್ತಿಲ್ಲ. ಎಇಇ ಬೇಜವಾಬ್ದಾರಿ ಉತ್ತರ ನೀಡುತ್ತಾರೆ ಎಂದು ಹೇಳಿದರು. ಸದಸ್ಯ ಅಬ್ರಹಾರ್ ಅಹಮದ್ ಮಾತನಾಡುವ ವೇಳೆ, ಜನರಿಗೆ ಕುಡಿಯಲು ನೀರು ಕೊಡಿ. ಇಲ್ಲವೇ ರಾಜೀನಾಮೆ ನೀಡಿ ಎಂದರು. ಸದಸ್ಯ ಆರ್.ಪಿ.ನಂಜುಂಡಸ್ವಾಮಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ ಎಂದು ಹೇಳಿದರು. ಪೌರಾಯುಕ್ತ ರಾಮದಾಸ್ ಪ್ರತಿಕ್ರಿಯಿಸಿ, ಚಾ.ನಗರಕ್ಕೆ ಕುಡಿಯುವ ನೀರು ಸರಬರಾಜು ಆಗುವ ತಿ.ನರಸೀಪುರದಲ್ಲಿರುವ ತಾಂತ್ರಿಕ ಸಮಸ್ಯೆಯಾಗಿದೆ. ಬೇಗ ಸಮಸ್ಯೆ ಬಗೆಹರಿಸಲಾಗುವುದು ಎಂದರು.
80 ಸಾವಿರ ರೂ.ದಂಡ:
ನಗರಸಭೆಯ ಬೇಜವಾಬ್ದಾರಿ ಕರ್ತವ್ಯಕ್ಕೆ ಸೆಸ್ಕ್‌ನಿಂದ 80 ಸಾವಿರ ರೂ.ದಂಡ ಬಿದ್ದಿದೆ. ಈ ಕುರಿತು ಸದಸ್ಯೆ ಸುಧಾ ಮಾತನಾಡಿ, ನಮ್ಮ ವಾರ್ಡ್‌ನಲ್ಲಿ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ ಉದ್ಘಾಟನೆ ಮಾಡಲಾಗಿತ್ತು. ಸೆಸ್ಕ್‌ನವರು ಬಂದು ಮೀಟರ್ ಅಳವಡಿಕೆ ಮಾಡಿಕೊಂಡಿಲ್ಲವೆಂದು 80 ಸಾವಿರ ರೂ.ದಂಡ ವಿಧಿಸಿದರು ಎಂದರು. ಪೌರಾಯುಕ್ತ ರಾಮದಾಸ್ ದಂಡ ಕಟ್ಟುವುದಾಗಿ ತಿಳಿಸಿದ್ದಕ್ಕೆ ಕೆಲವು ಸದಸ್ಯರು ಸಾರ್ವಜನಿಕರ ಹಣವನ್ನು ಹೀಗೆ ಪೋಲು ಮಾಡುತ್ತಿದ್ದೀರಾ ಎಂದು ಹರಿಹಾಯ್ದರು.
ನಗರಸಭೆಯಲ್ಲಿ ಸಕಾಲ ಅರ್ಜಿಗಳ ವಿಲೇವಾರಿ ಬಾಕಿ ಉಳಿದಿವೆ. ಸಿಬ್ಬಂದಿ ಕೊರತೆ ಕಾಡುತ್ತಿದೆ. ಸ್ವಚ್ಛತೆ ಇಲ್ಲ ಇನ್ನಿತರೆ ಸಮಸ್ಯೆಗಳು ಬಗೆಹರಿಯುತ್ತಲೇ ಇಲ್ಲ. ಜನಪರ ಆಡಳಿತ ನೀಡಲು ಸಾಧ್ಯವಾದರೆ ಅಧಿಕಾರ ನಡೆಸಿ. ಇಲ್ಲದಿದ್ದರೆ ಅಧ್ಯಕ್ಷ ಸುರೇಶ್ ರಾಜೀನಾಮೆ ನೀಡಲಿ. ಪೌರಾಯುಕ್ತ ರಾಮದಾಸ್ ಬೇರೆ ಕಡೆಗೆ ವರ್ಗಾವಣೆ ಮಾಡಿಸಿಕೊಳ್ಳಿ.
ಅಬ್ರಾಹರ್ ಅಹಮದ್, ನಗರಸಭೆ ಸದಸ್ಯ, ಚಾಮರಾಜನಗರ
ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ. ಆದರೂ ಕೆಲವು ಕೊರತೆಗಳು ಇವೆ. ಇದರಿಂದಾಗಿ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಮೌಖಿಕವಾಗಿ ಜಿಲ್ಲಾಧಿಕಾರಿಳಿಗೆ ತಿಳಿಸಿದ್ದೇನೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂಧಿ ಕೆಲಸ ಮಾಡುತ್ತಾರೆ ಎನ್ನುವ ಭರವಸೆ ಇದೆ. ಸ್ಪಂದಿಸದಿದ್ದರೆ ಶಿಸ್ತು ಕ್ರಮ ತೆಗೆದುಕೊಳ್ಳಲು ಒತ್ತಾಯಿಸುತ್ತೇನೆ.
ಸುರೇಶ್, ನಗರಸಭೆ ಅಧ್ಯಕ್ಷ, ಚಾಮರಾಜನಗರ