

ಕೂಡ್ಲಿಗಿ: ಮಳೆ ಅಭಾವದ ನಡುವೆಯೂ ಈ ಬಾರಿ ಗಣೇಶನ ಹಬ್ಬವನ್ನು ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಈ ಬಾರಿ ಸೋಮವಾರ ಹಾಗೂ ಮಂಗಳವಾರ ಎರಡು ದಿನಗಳು ಗಣೇಶ ಪ್ರತಿಷ್ಠಾಪನೆಗೆ ಗೊಂದಲ ಏರ್ಪಟ್ಟ ಕಾರಣ ಭಕ್ತರು ಸೋಮವಾರ ಕೆಲವರು ಗಣೇಶನ ಹಬ್ಬವನ್ನು ಆಚರಣೆ ಮಾಡಿದರೆ, ಇನ್ನು ಕೆಲವರು ಮಂಗಳವಾರ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದರು.
ಹಬ್ಬದ ಮುನ್ನ ದಿನ ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳ ಮಾರಾಟ ಜೋರಾಗಿತ್ತು. ಈ ಬಾರಿ ಮನೆಗಳಲ್ಲಿ ಬಹುತೇಕರು ಮಣ್ಣಿನ ಗಣಪತಿ ಪ್ರತಿಷ್ಠಾಪನೆ ಮಾಡಿದ್ದು ಕಂಡುಬಂತು. ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಮೆರವಣಿಗೆ ಮುಖಾಂತರ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ವಿದ್ಯಾ ಗಣಪತಿಯ ಸ್ಮರಣೆ ಮಾಡಿದ್ದು ಕಂಡು ಬಂತು.
ಸಂಜೆ ಪಟ್ಟಣದ ಬಹುತೇಕ ಕಡೆ ಗಣೇಶನನ್ನು ಪ್ರತಿಷ್ಠಾಪನೆ ಮಾಡಿರುವುದನ್ನು ನೋಡಲು ಭಕ್ತರು ಕುಟುಂಬ ಸಮೇತ ಬಂದು ದರ್ಶನ ಪಡೆದರು. ಪಟ್ಟಣದ ನಾಗರಿಕ ಹಿತರಕ್ಷಣೆ ಗಣಪತಿ ಹಾಗೂ ಹಿಂದು ಮಹಾಗಣಪತಿ ಪ್ರತಿಷ್ಠಾಪನೆ ಮಾಡಿದ ಮಂಟಪದ ದಾರಿ ಉದ್ದಗಲಕ್ಕೂ ಕೇಸರಿ ಧ್ವಜ ಏರಿಸಿ ಇಡೀ ವಾತಾವರಣವನ್ನು ಕೇಸರಿ ಮಯ ಮಾಡಿದ್ದು ವಿಶೇಷವಾಗಿ ಕಾಣುತ್ತಿತ್ತು.
ಗಣೇಶ ಉತ್ಸವಕ್ಕೆ ಮೆರುಗು ಬರಲು ಅನೇಕ ಕಡೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಗಣೇಶನ ದರ್ಶನ ಪಡೆದ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ತಾಲೂಕಿನಲ್ಲಿ ಈ ಬಾರಿ ಮಳೆಯಿಲ್ಲದೆ ಜನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಬಿತ್ತಿದ ಫಲಗಳು ಮಳೆ ಬಾರದೆ ಒಣಗಿವೆ. ಆದರೂ ಹೊಸಹಳ್ಳಿ ಹಾಗೂ ಗುಡೇಕೋಟೆ ಹೋಬಳಿಗಳಲ್ಲಿ ಶೇಂಗಾ ಬಿತ್ತನೆ ಹೆಚ್ಚಾಗಿ ಮಾಡಿರುವ ಕಾರಣ ಈಗಲೂ ಮಳೆ ಬಿದ್ದರೆ ಶೇಂಗಾ ಬೆಳೆ ಉತ್ತಮವಾಗಿ ಬರಲು ಅನುಕೂಲವಾಗಲಿದೆ ಎಂದರು.