

ಮನೋಹರ ಕಮ್ಮಾರ ಹಿರೇಬಾಗೇವಾಡಿ, ಬೆಳಗಾವಿ
ಇಲ್ಲಿನ ಮಳೆ ಮಲ್ಲಪ್ಪನ ಗುಡ್ಡದಲ್ಲಿ ಗುರುತಿಸಲಾದ ಜಾಗದಲ್ಲಿ ನಿರ್ಮಾಣವಾಗುತ್ತಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕಟ್ಟಡ ಕಾಮಗಾರಿ ವಿಳಂಬವಾಗುತ್ತಿರುವುದು ಶಿಕ್ಷಣ ಪ್ರೇಮಿಗಳಲ್ಲಿ ಬೇಸರ ತರಿಸಿದೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಳೆ ಮಲ್ಲಪ್ಪನ ಗುಡ್ಡದ 126 ಎಕರೆ ಜಾಗದಲ್ಲಿ ವಿವಿ ಕಟ್ಟಡಗಳ ನಿರ್ಮಾಣಕ್ಕಾಗಿ ಭೂಮಿಪೂಜೆ ಮತ್ತು ಶಿಲಾನ್ಯಾಸ ನೆರವೇರಿಸಿದ್ದರು. ಈ ಕಟ್ಟಡ ಕಾಮಗಾರಿ ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆಯೂ ಸೂಚಿಸಿದ್ದರು. ಆದರೆ, ಎಂಟು ತಿಂಗಳು ಗತಿಸಿದರೂ ಅದಿನ್ನೂ ಆವರಣ ಗೋಡೆ ಕಟ್ಟುವ ಹಂತದಲ್ಲೇ ಇದೆ. ಇನ್ನೂ 2 ಕಿಮೀ ಗೋಡೆ ನಿರ್ಮಾಣ ಬಾಕಿ ಇದೆ. ಗೋಡೆ ಕಟ್ಟುವಾಗ ಅಜಾಗರೂಕತೆಯಿಂದ ಖಾಸಗಿಯವರ ಜಮೀನಿನಲ್ಲಿ ಕಟ್ಟಿ ಎಷ್ಟೋ ಮೀಟರ್‌ಗಳಷ್ಟು ಗೋಡೆ ಕಾಮಗಾರಿ ವ್ಯರ್ಥವಾಗಿದೆ.
ತಕರಾರು ನಡೆದು ಕಾಮಗಾರಿ ಕೈಬಿಡಲಾಗಿದೆ. ಸದ್ಯದ ಕಾಮಗಾರಿ ವೇಗ ನೋಡಿದರೆ ವಿವಿ ನಿರ್ಮಾಣ ಒಂದು ವರ್ಷದಲ್ಲಿ ಮುಗಿಯುವುದು ಅಸಾಧ್ಯದ ಮಾತು. 126 ಎಕರೆ ಭೂಮಿಗೆ ಆವರಣ ಕಟ್ಟುವ ಕಾಮಗಾರಿಗೆ ಮೊದಲ ಆದ್ಯತೆ ನೀಡಲಾಗಿದೆ. ಆವರಣ ಭದ್ರಪಡಿಸಿಕೊಂಡು ಒಳಗೆ ಕಟ್ಟಡ ಕಾಮಗಾರಿಗೆ ಬೇಕಾಗುವ ಸಾಮಗ್ರಿಗಳ ದಾಸ್ತಾನು ಮಾಡಿ ಕಾಮಗಾರಿಗೆ ಪ್ರಾರಂಭಿಸಲಿದ್ದಾರೆ. ಸದ್ಯ ಕಟ್ಟಡ ಕಾಮಗಾರಿಗೆ ನಕ್ಷೆ ತಯಾರಿಸಿ ಲೇಔಟ್ ಮಾತ್ರ ಹಾಕಲಾಗುತ್ತಿದೆ. ಈತನ್ಮಧ್ಯೆ ಆವರಣ ಕಾಮಗಾರಿ ಖಾಸಗಿಯವರ ಜಮೀನಿನಲ್ಲಿ ನಡೆಸಿದ್ದರಿಂದ ತಕರಾರು ನಡೆದು ಕಾಮಗಾರಿ ಕೈಬಿಡಲಾಗಿದೆ.
ಸುಮಾರು 300 ಕಾರ್ಮಿಕರು ಉತ್ತರ ಭಾರತದಿಂದ ಬಂದವರಾಗಿದ್ದು, ಮಳೆಯಿಂದಾಗಿ ಗುಡ್ಡದ ಮೇಲೆ ವಾಹನ ಏರಲು ರಸ್ತೆ ಅನುಕೂಲವಾಗದ್ದರಿಂದ ಅವರೆಲ್ಲ ತಮ್ಮೂರಿಗೆ ತೆರಳಿದ್ದಾರೆ. ಮೂರು ತಿಂಗಳವರೆಗೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ ಎನ್ನಲಾಗುತ್ತಿದೆ. ಸದ್ಯ ಇದ್ದ ಸಾಮಗ್ರಿ ಕಾವಲಿಗಾಗಿ 24 ಗಂಟೆ ಕಾವಲುಗಾರರನ್ನು ನೇಮಿಸ ಲಾಗಿದೆ. ವಿವಿಗೆ ಹೋಗಲು ಇಲ್ಲಿಯ ಎಪಿಎಂಸಿ ಪಕ್ಕದಲ್ಲಿ ವ್ಯವಸ್ಥಿತವಾದ ಅತೀ ಸಮೀಪದ ರಸ್ತೆ ನಿರ್ಮಾಣ ಕಾಮಗಾರಿಗೆ ಆನ್‌ಲೈನ್‌ನಲ್ಲಿ ಗುತ್ತಿಗೆ ಕರೆಯಲಾಗಿತ್ತು. ಅದಕ್ಕೆ ತಕ್ಕಂತೆ ಗುತ್ತಿಗೆದಾರರು ಅರ್ಜಿ ಸಲ್ಲಿಸಿದ್ದಾರೆ. ಗಣೇಶ ಚತುರ್ಥಿ ನಂತರ ಪ್ರಕ್ರಿಯೆ ಮುಂದುವರಿಯಲಿದೆ ಎನ್ನಲಾಗಿದೆ.