

ಚಿತ್ರದುರ್ಗ: ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಎದುರಾಳಿ ಅಭ್ಯರ್ಥಿಗಿಂತ ಸ್ವಲ್ಪ ಹೆಚ್ಚು ಹಣ ಖರ್ಚು ಮಾಡಬೇಕಿದೆ ಎಂದಿರುವ ಬಿಜೆಪಿ ಮೊಳಕಾಲ್ಮುರು ಎಸ್ಟಿ ಮೋರ್ಚಾ ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್ ಮುಖಂಡ ಸಿ.ಶಿವುಯಾದವ್ ಒತ್ತಾಯಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರೂ ಇಲ್ಲಿನ ಚುನಾವಣಾ ಆಯೋಗ ಕ್ರಮ ಕೈಗೊಂಡಿಲ್ಲ. ಸಂಪೂರ್ಣ ನಿಷ್ಕ್ರಿಯಗೊಂಡಿದೆ. ಬಿಜೆಪಿ ಪರವಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಆದ್ದರಿಂದ ನ್ಯಾಯಯುತ, ನಿಷ್ಪಕ್ಷಪಾತ ಚುನಾವಣೆ ನಡೆಸಲಿಕ್ಕಾಗಿ ಕ್ಷೇತ್ರಾದ್ಯಂತ ರಾಜ್ಯ ಚುನಾವಣಾ ಆಯೋಗವೇ ಕಣ್ಗಾವಲು ಪಡೆ ರಚಿಸಬೇಕು ಎಂದು ಮನವಿ ಮಾಡಿದರು.
ಆಮಿಷದ ಪ್ರಸ್ತಾಪ ಎತ್ತಿರುವುದನ್ನು ನೋಡಿದರೆ, ಮದ್ಯ ಮತ್ತು ಹಣದ ಹೊಳೆ ಹರಿಯುವುದರಲ್ಲಿ ಅನುಮಾನವಿಲ್ಲ. ವಾಮ ಮಾರ್ಗದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿಗರು ಏನು ಬೇಕಾದರೂ ಮಾಡುತ್ತಾರೆ. ಹೇಳಿಕೆ ನೀಡಿದ ವ್ಯಕ್ತಿ ಮಾತ್ರವಲ್ಲ, ಅಭ್ಯರ್ಥಿ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಸೈಯದ್ ವಲಿ ಖಾದ್ರಿ, ವಕೀಲ ರವೀಂದ್ರ ಇದ್ದರು.
ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಗೋವಿಂದ ಎಂ ಕಾರಜೋಳ ಅವರು, ಹಣ ಇನ್ನಿತರೆ ಆಮಿಷ ತೋರಿಸಿ ಚುನಾವಣೆ ಎದುರಿಸುವುದನ್ನು ಬಿಜೆಪಿಯಾಗಲಿ, ನಾನಾಗಲಿ ಎಂದಿಗೂ ಮಾಡಿಲ್ಲ. ನ್ಯಾಯಯುತವಾಗಿಯೇ ಮಾಡುತ್ತೇವೆ. ಆರೋಪ ಸತ್ಯಕ್ಕೆ ದೂರವಾದುದು ಎಂದು ಹೇಳಿದರು.