

ಮಂಡ್ಯ: ಬಾಲ್ಯದಲ್ಲಿ ಮಕ್ಕಳು ಪಾಲಕರ ಆಸರೆಯಲ್ಲಿ ಬೆಳೆದು ಭವಿಷ್ಯದ ಬದುಕನ್ನು ಸುಂದರವಾಗಿಸಿಕೊಳ್ಳಬೇಕು. ಆಮಿಷ, ಕುಟುಂಬದವರ ಮೇಲಿನ ಕ್ಷುಲ್ಲಕ ಕಾರಣಕ್ಕೆ ಸಿಟ್ಟಿನಿಂದ ಮನೆಯಿಂದ ಹೊರಹೋಗಿ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿಕೊಳ್ಳಬೇಡಿ ಎಂದು ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಮಾದೇಶ್ ತಿಳಿಸಿದರು.
ಮಳವಳ್ಳಿ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ಸೋಮವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಾನವ ಕಳ್ಳ ಸಾಗಣೆ ತಡೆ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಸಣ್ಣಪುಟ್ಟ ವಿಷಯಗಳಿಗೆ ಪಾಲಕರೊಂದಿಗೆ ಬೇಸರ ಮಾಡಿಕೊಂಡು ಮನೆಬಿಟ್ಟು ಹೋಗುವಂತಹ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳದಿರಿ. ಇಂತಹ ಮಕ್ಕಳನ್ನೇ ಗುರಿಯಾಗಿಸಿಕೊಂಡು ಆರ್ಥಿಕವಾಗಿ ಲಾಭ ಗಳಿಸುವಂತ ದುಷ್ಟಕೂಟಗಳು ಸಮಾಜದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೆಲಸ ಕೊಡಿಸುವುದಾಗಿಯೋ ಇತರೆ ಯಾವುದಾದರೂ ಆಮಿಷಗಳನ್ನು ಒಡ್ಡಿ ಮನವೊಲಿಸಿಕೊಳ್ಳುತ್ತಾರೆ. ನಂತರ ಭಿಕ್ಷಾಟನೆ, ಅಂಗಾಂಗ ಮಾರಾಟ ಮಾಡುವ ಹಾಗೂ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆ ಜಾಲಗಳಲ್ಲಿ ದೂಡಿ ಹಣಗಳಿಸಲು ಹವಣಿಸುತ್ತಿರುತ್ತಾರೆ. ಇಂತಹ ಕಾನೂನು ಬಾಹಿರ ಚಟುವಟಿಕೆ ನಡೆಸುವಂತಹ ದಂಧೆಕೋರರ ಜಾಲಕ್ಕೆ ಸಿಲುಕಿ ಜೀವನವನ್ನೇ ನಾಶಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.
ಹಲಗೂರು ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಧರ್ ಉಪನ್ಯಾಸ ನೀಡಿದರು. ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ನ್ಯಾಯಾಧೀಶ ಸಚೀನ್ ಶಿವಪೂಜೆ, ಡಿವೈಎಸ್‌ಪಿ ನವೀನ್ ಕುಮಾರ್, ಪಟ್ಟಣ ಠಾಣೆ ಪಿಐ ಎ.ಕೆ.ರಾಜೇಶ್, ಗ್ರಾಮಾಂತ ರಾಣೆ ಪಿಎಸ್‌ಐ ಜಗದೀಶ್, ಸಿಡಿಪಿಒ ದೀಪಾ, ವಕೀಲರ ಸಂಘದ ಅಧ್ಯಕ್ಷ ಸುಂದರ್, ಕಾರ್ಯದರ್ಶಿ ನಟೇಶ್, ವಕೀಲ ಶ್ರೀಕಂಠಸ್ವಾಮಿ ಇತರರಿದ್ದರು.