

ನಾಗಮಂಗಲ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ನೀಡುತ್ತಿರುವ ಆಮಿಷಗಳಿಗೆ ಯಾರೂ ಒಳಗಾಗದೆ ಮತದ ಮಹತ್ವವನ್ನು ಅರಿತು ಮುಂದಿನ ಪೀಳಿಗೆಗೆ ಉತ್ತಮ ಸಮಾಜ ನಿರ್ಮಿಸಲು ಶ್ರಮಿಸಿ, ಮತವನ್ನು ಸಮರ್ಪಕವಾಗಿ ಚಲಾಯಿಸಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಯೋಗೇಶ್ ಸಲಹೆ ನೀಡಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಮಹಿಳೆಯರಿಗೆ ಕಾನೂನು ಅರಿವು ನೆರವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗೆ ಪೂರಕವಾಗಿರುವ ಕಾಯ್ದೆ, ಕಾನೂನುಗಳ ಬಗ್ಗೆ ಜಾಗೃತರಾಗಬೇಕು. ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಇನ್ನೂ ಸರಿಯಾದ ಅವಕಾಶಗಳು ಸಿಕ್ಕಿಲ್ಲ. ಸ್ವಾತಂತ್ರ್ಯ ಬರುವ ಮುನ್ನ ಮಹಿಳೆಯ ಸ್ಥಾನಮಾನ ಹೇಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಹೆಣ್ಣು ಮಕ್ಕಳೆಂದರೆ ಅಡುಗೆ ಮನೆಗೆ ಸೀಮಿತ ಎಂಬ ಮನೋಭಾವವಿತ್ತು. ಅಂಬೇಡ್ಕರ್ ಅವರು ಸಮಾನತೆಯನ್ನು ತರಲು ಶ್ರಮಿಸಿದರು. ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾನೂನುಗಳನ್ನು ರೂಪಿಸಿದರು. ಹೀಗಾಗಿ ಸಾಮಾನ್ಯ ಮಹಿಳೆ ದೇಶದ ರಾಷ್ಟ್ರಪತಿಯಾಗಲು ಸಾಧ್ಯವಿದೆ. ಇದೆಲ್ಲವೂ ಸಾಧ್ಯವಾಗಿದ್ದು ಸಂವಿಧಾನ ನೀಡಿರುವ ಸಮಾನತೆಯ ಕೊಡುಗೆಯಾಗಿದೆ ಎಂದು ಹೇಳಿದರು.
ವಕೀಲ ಕೆ.ಬಿ.ಶುಭಮೂರ್ತಿ ಕಾರ್ಯಾಗಾರದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಸಿವಿಲ್ ಮತ್ತು ಕ್ರಿಮಿನಲ್ ಕಾಯ್ದೆ, ವರದಕ್ಷಿಣೆ ಕಾಯ್ದೆ, ಪೋಕ್ಸೋ ಕಾಯ್ದೆ, ಕೌಟುಂಬಿಕ ದೌರ್ಜನ್ಯ ತಡೆಗಟ್ಟುವ ಕಾಯ್ದೆ, ವಿವಾಹ ಕಾಯ್ದೆ, ಲೈಂಗಿಕ ದೌರ್ಜನ್ಯ ಕಾಯ್ದೆ, ಜೀವನಾಂಶ ಕಾಯ್ದೆ, ಆಸ್ತಿಯ ಹಕ್ಕುಗಳ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಳ ಕುರಿತು ಮಾಹಿತಿ ನೀಡಿದರು. ನಂತರ ವಕೀಲ ಕೆ.ಎಚ್.ಮಹದೇವ ಮಹಿಳಾ ಕಾನೂನುಗಳ ಕುರಿತು ಜಾಗೃತಿ ಮೂಡಿಸಿದರು.
ಸಿವಿಲ್ ನ್ಯಾಯಾಧೀಶ ಬಿ.ಗಿರಿಗೌಡ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕೆ.ಪಿ.ಸಿದ್ದಪ್ಪಾಜಿ, ಹೆಚ್ಚುವರಿ ಸರ್ಕಾರಿ ವಕೀಲ ಪಿ.ಸಿ.ಮಂಜುನಾಥ್, ಸಹಾಯಕ ಸರ್ಕಾರಿ ಅಭಿಯೋಜಕಿ ಅರುಣಬಾಯಿ, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಕೆ.ರಾಮೇಗೌಡ, ಉಪಾಧ್ಯಕ್ಷ ಪುರುಷೋತ್ತಮ್, ವಕೀಲ ಚಿಕ್ಕಸ್ವಾಮಿ ಹಾಗೂ ವಿವಿಧ ಸಂಘ- ಸಂಸ್ಥೆಗಳ ಮಹಿಳೆಯರು ಇದ್ದರು.