ಆಮಿಷಗಳಿಂದ ಸೋಲು ಅನುಭವಿಸಬೇಕಾಯಿತು: ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನದ ಪರಾಜಿತ ಅಭ್ಯರ್ಥಿ ಕೆ.ಎಂ. ಶ್ರೀನಿವಾಸ್

K.M. SRINIVAS- press meet (7)
Published on

ಹಾಸನ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆಗೆ ನಾನು ಸ್ವಾಭಿಮಾನಿ ತಂಡದಿಂದ ಸ್ಪರ್ಧೆ ಮಾಡಿ ಅಲ್ಪ ಮತಗಳ ಅಂತರದಲ್ಲಿ ಪರಾಜಿತಗೊಂಡೆ. ಕಾಂಗ್ರೆಸ್ ಮತ್ತು ಜೆಡಿಎಸ್ ರಾಜಕಾರಣಿಗಳ ಒತ್ತಡ ಹಾಗೂ ಆಮಿಷಗಳಿಂದ ನಾನು ಸೋಲು ಅನುಭವಿಸಬೇಕಾಯಿತು ಎಂದು ಪರಾಜಿತ ಅಭ್ಯರ್ಥಿ ಕೆ.ಎಂ. ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.

ನಮ್ಮ ಎದುರಾಳಿ ಅಭ್ಯರ್ಥಿಯನ್ನೇ ಆಯ್ಕೆ ಮಾಡಬೇಕೆಂದು ಪಣತೊಟ್ಟು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು, ಜೆಡಿಎಸ್ ಶಾಸಕರು ಹಾಗೂ ಮಾಜಿ ಸಚಿವರು, ಕಾಂಗ್ರೆಸ್ ಮುಖಂಡ ಜತೆ ಸೇರಿ ಒಬ್ಬ ಬಡ ಉಪನ್ಯಾಸಕನ ವಿರುದ್ಧ ದೊಡ್ಡ ಮಟ್ಟದ ರಾಜಕಾರಣ ಮಾಡಿದರು. ಡಿ.3ರವರೆಗೂ ಅನೇಕರು ನಮ್ಮ ಜತೆ ಗುರುತಿಸಿಕೊಂಡು ಸಂಘಟನೆಗೆ ಬಂದಂತಹವರು ನಮಗಾಗಿ ದುಡಿದಿದ್ದಾರೆ. ಚುನಾವಣೆ ಹಿಂದಿನ ದಿನ ರಾತ್ರಿಯಲ್ಲಿ ಗಂಟೆ ಗಂಟೆಗೂ ನಡೆದಂತಹ ವ್ಯವಹಾರ, ವ್ಯವಹಾರಗಳ ನಡೆ ದುಃಖ ತಂದಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ಹೊರ ಹಾಕಿದರು.

ಆತ್ಮೀಯರೇ ಎನಿಸಿಕೊಂಡಿದ್ದ ನಿರ್ದೇಶಕರು ಮೋಸ ಮಾಡಿದರು. ಡಿ. 3ರ ರಾತ್ರಿಯಿಂದ ಬೆಳಿಗ್ಗೆ ನಡೆದ ವ್ಯವಹಾರದಿಂದ ನಾನು ಸೋಲಬೇಕಾಯಿತು. ಯಾರೂ ಸಂಘದ ಹಿತದೃಷ್ಟಿಯಿಂದ ಚುನಾವಣೆಯನ್ನು ನೋಡಲಿಲ್ಲ. ಐಪಿಎಲ್ ಮಾದರಿಯಲ್ಲಿ ಈ ಚುನಾವಣೆ ನಡೆದಿದೆ. ಯಾರಾರು ಎಲ್ಲೆಲ್ಲಿ ಒಂದಾದರು ಗೊತ್ತಾಗಲೇ ಇಲ್ಲ. ಶಿವಸ್ವಾಮಿ ಮತ್ತು ನಾನು ಒಟ್ಟಾದಾಗ ಬೆಂಬಲಿಸಿದವರೇ ನಂತರ ನಮಗೆ ಮೋಸ ಮಾಡಿದರು. ಐದು ವರ್ಷಗಳ ಹಿಂದೆಯೂ ಇದೇ ರೀತಿ ರಾಜಕೀಯ ಮಾಡಿ ನನ್ನನ್ನು ಸೋಲಿಸಿದರು. ಎಂದು ಹೇಳಿದರು.

ನಾವು ಎಲ್ಲಾ ಸರ್ಕಾರಿ ನೌಕರರ ಮನಸ್ಸು ಗೆದ್ದಿದ್ದೇವು. ಮತ ಹಾಕುವುದರಲ್ಲಿ ನಮಗೆ ಮೋಸ ಮಾಡಿದರು. ನಾನು ಇನ್ನೂ ಮುಂದೆ ಯಾವ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ. ಹಲವಾರು ಆಮಿಷದ ನಡುವೆಯೂ ನನಗೆ 31 ಮತಗಳನ್ನು ನೀಡಿ ಸಹಕಾರ ಕೊಟ್ಟವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಪರಿಷತ್ ಸದಸ್ಯ ಟಿ. ರಾಜು, ಸಂಘದ ಖಜಾಂಚಿ ಮಧು, ಸಂಘದ ನಿರ್ದೇಶಕ ವಿಶ್ವನಾಥ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net