ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದ ಆಚಾರ್ಯ ಶ್ರೀ ಗುಣಧರನಂದಿ

h8-AGM 2
Published on

ಹುಬ್ಬಳ್ಳಿ: ಚಿಕ್ಕೋಡಿಯ ಹಿರೇಕೋಡಿ ನಂದಿ ಪರ್ವತ ಆಶ್ರಮದ ಜೈನ್ ಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯು ನಮಗೆ ತೀವ್ರ ಆಘಾತ ಉಂಟು ಮಾಡಿದೆ. ರಾಜ್ಯದ ಎಲ್ಲ ಜೈನ್ ಮುನಿಗಳಿಗೆ ಸರ್ಕಾರ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ತಕ್ಷಣದಿಂದ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ವರೂರ ನವಗ್ರಹ ತೀರ್ಥ ಕ್ಷೇತ್ರದ ಆಚಾರ್ಯ ಶ್ರೀ ಗುಣಧರ ನಂದಿ ಮಹಾರಾಜರು ಹೇಳಿದರು.

ಹುಬ್ಬಳ್ಳಿ ವರೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತ್ಯಂತ ಭೀಕರವಾಗಿ ನಡೆದಿರುವ ಹತ್ಯೆ ಘಟನೆಯು ರಾಜ್ಯದಲ್ಲಿ ಜೈನ್ ಸಮಾಜಕ್ಕೆ ಅಸುರಕ್ಷತೆಯ ಭಾವನೆಯನ್ನು ಹೆಚ್ಚಿಸಿದೆ. ಜೈನ್ ಮುನಿಗಳ ಸುರಕ್ಷತೆ ಬಗ್ಗೆ ಮುಖ್ಯಮಂತ್ರಿಗಳಾಗಲಿ ಅಥವಾ ಅಧಿಕಾರಿಗಗಳಾಗಲಿ ಲಿಖಿತ ಭರವಸೆ ನೀಡುವವರೆಗೆ ಆಮರಣ ಉಪವಾಸ ಸತ್ಯಾಗ್ರಹ ಮುಂದುವರಿಸುತ್ತೇವೆ. ಈಗಿನಿಂದಲೇ ಅನ್ನ, ನೀರು ತ್ಯಾಗ ಮಾಡುತ್ತಿದ್ದೇವೆ ಎಂದರು.

ಸಹಾಯವೆಂದು ಪಡೆದ 6 ಲಕ್ಷ ರೂ. ಹಣ ಮರಳಿಸುವಂತೆ ಕೇಳಿದ್ದಕ್ಕೆ ಶ್ರೀ ಕಾಮಕುಮಾರ ನಂದಿ ಮಹಾರಾಜರನ್ನು ಅತ್ಯಂತ ಭರ್ಬರವಾಗಿ ಹತ್ಯೆ ಮಾಡಲಾಗಿದೆ. ವಿದ್ಯುತ್ ಶಾಕ್ ನೀಡಿ ಕೊಲೆ ಮಾಡಿ, ಬಳಿಕ ದೇಹವನ್ನು ತುಂಡು ತುಂಡು ಮಾಡಿ ಕೊಳವೆ ಬಾವಿಯಲ್ಲಿ ಹಾಕಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದು ಹಣ ಕೊಟ್ಟು ಹೆಣ ತೆಗೆದುಕೊಂಡಂತಾಯಿತು. ಅಹಿಂಸಾ ತತ್ವ ಪಾಲನೆ ಮಾಡುವ ಸಮಾಜದ ಜೈನ್ ಮುನಿಯ ಹತ್ಯೆ ತುಂಬಾ ನೋವು ತಂದಿದೆ ಎಂದು ಕಣ್ಣೀರು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net