ಆಭರಣ, ಜಾನುವಾರು, ಬೈಕ್​ ಕಳ್ಳರ ಬಂಧನ

1704klb02
Published on

ಕಲಬುರಗಿ: ಜಿಲ್ಲೆಯ ವಿವಿಧ ಪೊಲೀಸ್​ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಮನೆ, ಜಾನುವಾರು, ಬೈಕ್​ಗಳ ಕಳ್ಳತನ ಹಾಗೂ ದರೋಡೆ ಪ್ರಕರಣ ಭೇದಿಸಿದ್ದು, ಒಂಬತ್ತು ಆರೋಪಿಗಳನ್ನು ಬಂಧಿಸಿ ಬಂಧಿತರಿಂದ ೧೦ ಲಕ್ಕಿಂತ ಹೆಚ್ಚಿನ ಮೌಲ್ಯದ ವಸ್ತು, ಸಾಮಗ್ರಿ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಹೇಳಿದರು.

ಯಡ್ರಾಮಿಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಗಂಗಾಧರ ರಮೇಶ, ಜೇರ‍್ಗಿ ಪೊಲೀಸ್​ ಠಾಣೆ ವ್ಯಾಪ್ತಿಯ ದರೋಡೆ ಪ್ರಕರಣದಲ್ಲಿ ನಗರದ ಭವಾನಿಕುಮಾರ ಸೈಬಣ್ಣ, ಸಂತೋಷ ಕುಮಾರ ಶರಣಪ್ಪ, ಮಹೇಶ ಪದ್ಮಾ ಮತ್ತು ಸಂಜುಕುಮಾರ ಶ್ಯಾಮರಾವ ಹಾಗೂ ಚಿತ್ತಾಪುರದ ಬೈಕ್​ ಕಳ್ಳತನ ಪ್ರಕರಣದಲ್ಲಿ ದಂಡಗುಂಡದ ನಿಂಗಪ್ಪ ಚೌಡಪ್ಪ, ಶಹಾಬಾದ್​ ವ್ಯಾಪ್ತಿಯ ಮಾಡಬೂಳ ಪೊಲೀಸ್​ ಠಾಣೆಯ ಜಾನುವಾರು ಕಳ್ಳತನ ಕೇಸ್​ನಲ್ಲಿ ಅಕ್ಲಾಕ್​ ಚೌಧರಿ, ಮಹಮದ್​ ಮುಸ್ತಕ್​ ಮತ್ತು ಶಕೀಲ್​ ಅಹ್ಮದ್​ನನ್ನು ಬಂಧಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮನೆಗಳ್ಳತನ: ಯಡ್ರಾಮಿ ಪೊಲೀಸ್​ ಠಾಣೆ ವ್ಯಾಪ್ತಿಯ ರಾಮಣ್ಣ ಕಟ್ಟಿಮನಿ ಮನೆಯಲ್ಲಿ ೧.೩೦ ಲಕ್ಷ ರೂ. ಚಿನ್ನ ಕಳ್ಳತನ ದೂರು ದಾಖಲಾಗಿತ್ತು. ಅನುಮಾನಾಸ್ಪದವಾಗಿ ರಾತ್ರಿ ವೇಳೆ ಎಲ್ಲೆಂದರಲ್ಲಿ ಓಡಾಡಿಕೊಂಡಿದ್ದ ಗಂಗಾಧರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಒಪ್ಪಿದ್ದಾನೆ. ಇತನಿಂದ ೫ ಸಾವಿರ ರೂ. ನಗದು, ೧.೨೫ ಲ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

೧೧ ಬೈಕ್​ ವಶಕ್ಕೆ: ಚಿತ್ತಾಪುರ ಠಾಣೆಯ ವ್ಯಾಪ್ತಿಯಲ್ಲಿ ೧೧ ಬೈಕ್​ ಕದ್ದ ಕರ‍್ಪೆಂಟರ್​ ದಂಡಗುಂಡದ ನಿಂಗಪ್ಪನನ್ನು ಬಂಧಿಸಲಾಗಿದೆ. ಮಲ್ಲಪ್ಪ ಡಬ್ಬಿಗೇಗಾ ಅವರ ಬೈಕ್​ ಕಳ್ಳತನ ತನಿಖೆ ನಡೆಸುತ್ತಿದ್ದು, ಬಂಧಿತ ನಿಂಗಪ್ಪ ಬೇರೆ ಬೇರೆ ಬೈಕ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ. ಅನುಮಾನಗೊಂಡು ಬಂಧಿಸಿ, ವಿಚಾರಿಸಿದಾಗ ೧೧ ಬೈಕ್​ ಕಳ್ಳತನ ತಿಳಿದಿದೆ. ಒಂದು ಬೈಕ್​ ಕಲಬುರಗಿ ಜಿಲ್ಲಾ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದು, ಒಂದು ರ‍್ಷದಿಂದ ಯಾದಗಿರಿ ಬಸ್​, ರೈಲು ನಿಲ್ದಾಣ, ಗಂಜ್​ ಸಮೀಪ ನಿಲ್ಲಿಸಿದ್ದ ೧೦ ಬೈಕ್​ ಕದ್ದಿದ್ದಾನೆ. ಕದ್ದ ಬೈಕ್​ಗಳ ಇಂಜಿನ್​, ಚೆಸಿ ನಂಬರ್​ ಬದಲಾಯಿಸುತ್ತಿದ್ದ ಎಂದು ತಿಳಿದಿದೆ. ೩.೦೫ ಲ ರೂ. ಮೌಲ್ಯದ ೧೧ ಬೈಕ್​ ವಶಕ್ಕೆ ಪಡೆಯಲಾಗಿದೆ ಎಂದರು.

ಜೇರ‍್ಗಿ, ಮಾಡಬೂಳ ಹಾಗೂ ಚಿತ್ತಾಪುರ ಠಾಣೆಗಳ ಸಿಬ್ಬಂದಿಯನ್ನು ಪ್ರಶಂಸಿಸಿ, ಅವರಿಗೆ ಪ್ರಶಂಸೆ ಪತ್ರಗಳನ್ನೂ ಎಸ್​ಪಿ ನೀಡಿದರು. ಹೆಚ್ಚುವರಿ ಎಸ್​ಪಿ ಮಹೇಶ ಮೇಣ್ಣನವರ, ಡಿವೈಎಸ್ಪಿ ಶಂಕರಗೌಡ ಪಾಟೀಲ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net