

ಮದ್ದೂರು: ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಬಂಡಿ ಓಡಿಸಿದರು… ನೀರು ತುಂಬಿದ ಬಿಂದಿಗೆಯನ್ನು ತಲೆ ಹೊತ್ತು ಮಹಿಳೆಯರು ಓಡಿದರೆ, ವಿದ್ಯಾರ್ಥಿನಿಯರು ಒಂಟಿ ಕಾಲಿನ ಓಟದಲ್ಲಿ ಭಾಗವಹಿಸಿದರು… ಪುಟಾಣಿ ಮಕ್ಕಳು ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಾಕಿ ಗಮನ ಸೆಳೆದರು… ಗೆದ್ದವರು ಬಹುಮಾನ ಪಡೆದರೆ, ಸೋತವರು ಕ್ರೀಡಾ ಸ್ಫೂರ್ತಿ ಮೆರೆದರು…
ತಾಲೂಕಿನ ಕೊಪ್ಪ ಹೋಬಳಿಯ ಆಬಲವಾಡಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ತೊಪ್ಪಿನ ತಿಮ್ಮಪ್ಪನ ದೇವಸ್ಥಾನದ ಆವರಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ, ದಿಗ್ವಿಜಯ ಸುದ್ದಿವಾಹಿನಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಆಬಲವಾಡಿ ಶ್ರೀ ತೋಪಿನ ತಿಮ್ಮಪ್ಪ ಕಲ್ಯಾಣ ಮಂದಿರ ಸೇವಾ ಟ್ರಸ್ಟ್, ಕೊಪ್ಪದ ಯಂಬಾಜಿಯರ್ ಸೇವಾ ಮಠ, ಕರ್ನಾಟಕ ಕ್ರಾಂತಿ ದಳ ಹಾಗೂ ನೆಲದ ಸಿರಿ ಗ್ರಾಮಾಭಿವೃದ್ಧಿ ಸೇವಾ ಟ್ರಸ್ಟ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಮೀಣಾ ಕ್ರೀಡೋತ್ಸವದಲ್ಲಿ ಕಂಡುಬಂದ ದೃಶ್ಯಗಳು.
ಗ್ರಾಮೀಣ ಮಹಿಳಾ ಕ್ರೀಡೋತ್ಸವದಲ್ಲಿ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಬಂಡಿ ಹೊಡೆಯುವ, ಬಿಂದಿಗೆ ಎತ್ತಿಕೊಂಡು ಓಡುವ, ಕೂಸುಮರಿ, ಒಂಟಿ ಕಾಲಿನ ಓಟ, ಪುಟಾಣಿಗಳಿಗೆ ಓಟದ ಸ್ಪರ್ಧೆ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿ ಕ್ರೀಡೋತ್ಸವಕ್ಕೆ ಕಳೆ ತಂದರು.
ಆಬಲವಾಡಿ ಶ್ರೀ ತೋಪಿನ ತಿಮ್ಮಪ್ಪ ಕಲ್ಯಾಣ ಮಂದಿರ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣೇಗೌಡ ಕ್ರೀಡೋತ್ಸವ ಚಾಲನೆ ನೀಡಿ ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಜಯವಾಣಿ ಪತ್ರಿಕೆಯಿಂದ ಗ್ರಾಮೀಣ ಪ್ರದೇಶದಲ್ಲಿ ಮಹಿಳಾ ಕ್ರೀಡೋತ್ಸವ ಮಾಡುತ್ತಿರುವುದು ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಕ್ರಾಂತಿದಳದ ಅಧ್ಯಕ್ಷ ಸಿ.ಎಂ.ಕ್ರಾಂತಿಸಿಂಹ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಗ್ರಾಮೀಣ ಕ್ರೀಡಾಕೂಟಗಳು ನಶಿಸುವ ಹಂತಕ್ಕೆ ತಲುಪುತ್ತಿವೆ. ಗ್ರಾಮೀಣ ಕ್ರೀಡಾಕೂಟವನ್ನು ಆಯೋಜನೆ ಮಾಡಿರುವುದು ಪತ್ರಿಕೆಯ ಕಳಕಳಿಯನ್ನು ತೋರುತ್ತದೆ ಎಂದರು.
ಗ್ರಾಮದ ಯಜಮಾನ ವೀರಣ್ಣ, ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಜನೆ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಎನ್.ತೇಜಾವತಿ, ರಾಹುಲ್ ದ್ರಾವಿಡ್ ಕ್ರೀಡಾ ಬಳದ ಅಧ್ಯಕ್ಷ ಆಬಲವಾಡಿ ಅನಿಲ್, ನೆಲದ ಸರಿ ಗ್ರಾಮಾಭಿವೃದ್ಧಿ ಸೇವಾ ಟ್ರಸ್ಟ್‌ನ ಸಂಚಾಲಕ ಎ.ಎನ್.ನಂದೀಶ್ ಮಾತನಾಡಿದರು.
ನೆಲದ ಸಿರಿ ಗ್ರಾಮಾಭಿವೃದ್ಧಿ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎ.ಮಧುಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿಗಳಾದ ದಿವ್ಯಾ, ಅಶ್ವಿನಿ, ರಮ್ಯಾ, ಅಂಗನವಾಡಿ ಕಾರ್ಯಕರ್ತೆಯರಾದ ಸೌಭಾಗ್ಯಮ್ಮ, ಮಂಜುಳಾ, ಪ್ರಣೀತ, ಶಿಕ್ಷಕ ನಾಗರಾಜು, ಶಿಲ್ಪಾ ಇತರರಿದ್ದರು.