

ಕಾರವಾರ: ಕಾಲೇಜ್ಗಳ ಪ್ರಾರಂಭವಾಗಿ ಮೂರು ದಿನ ಕಳೆದರೂ ಆಫ್ಲೈನ್ ತರಗತಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರವಿದೆ.
ಅಂತಿಮ ವರ್ಷದ ತರಗತಿಗಳನ್ನು ಮಾತ್ರ ಪ್ರಾರಂಭಿಸಲು ಸರ್ಕಾರ ಸೂಚನೆ ನೀಡಿದೆ. ಅದರಂತೆ ಜಿಲ್ಲೆಯ ಎಲ್ಲ ಕಾಲೇಜ್ಗಳನ್ನು ಸ್ಯಾನಿಟೈಸ್ ಮಾಡಿ ತರಗತಿ ಪ್ರಾರಂಭಿಸಲಾಗಿದೆ. ಆದರೆ, ಕಾಲೇಜ್ಗೆ ಆಗಮಿಸಲು ಕೋವಿಡ್ ಪರೀಕ್ಷಾ ವರದಿ ಕಡ್ಡಾಯ ಎಂದು ಸರ್ಕಾರ ಹೇಳಿದ್ದರಿಂದ ವಿದ್ಯಾರ್ಥಿಗಳು ತರಗತಿಗೆ ಬರಲು ವಿಳಂಬವಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 15 ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ಗಳಲ್ಲಿ 3962 ಅಂತಿಮ ಪದವಿ ವಿದ್ಯಾರ್ಥಿಗಳಿದ್ದಾರೆ. ಇದುವರೆಗೆ 2970 ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಆದರೆ, ಒಮ್ಮೆಲೇ ಸಾಕಷ್ಟು ವಿದ್ಯಾರ್ಥಿಗಳ ಗಂಟಲ ದ್ರವದ ಮಾದರಿ ಕ್ರಿಮ್್ಸ ಆಸ್ಪತ್ರೆಗೆ ರವಾನೆಯಾಗಿದ್ದರಿಂದ ಇನ್ನೂ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳ ಪರೀಕ್ಷಾ ವರದಿ ಬರುವುದು ಬಾಕಿ ಇದೆ. ಇದರಿಂದ ಕಾಲೇಜ್ಗೆ ಹಾಜರಾಗಲು ವಿದ್ಯಾರ್ಥಿಗಳಿಗೆ ವಿಳಂಬವಾಗುತ್ತಿದೆ.
ಬಸ್ ಸಮಸ್ಯೆ: ರಸ್ತೆ ಸಾರಿಗೆ ಸಂಸ್ಥೆ ಹಳೆಯ ಪಾಸ್ ಬಳಸಿ ಕಾಲೇಜ್ ವಿದ್ಯಾರ್ಥಿಗಳು ಉಚಿತವಾಗಿ ಓಡಾಡಲು ಅನುವು ಮಾಡಿಕೊಟ್ಟಿದೆ. ಆದರೆ, ಜನ ಸಂಚಾರ ಕಡಿಮೆ ಇರುವುದರಿಂದ ಎಲ್ಲ ಗ್ರಾಮೀಣ ಭಾಗದ ಬಸ್ಗಳ ಓಡಾಟ ನಡೆಸಿಲ್ಲ. ಇದರಿಂದಲೂ ಕೆಲ ವಿದ್ಯಾರ್ಥಿಗಳು ತರಗತಿಗಳಿಗೆ ಬರಲು ತೊಂದರೆ ಉಂಟಾಗುತ್ತಿದೆ.
ಎಷ್ಟು ವಿದ್ಯಾರ್ಥಿಗಳು: ಶುಕ್ರವಾರದ ವರದಿಯಂತೆ ಕಾರವಾರದ ಸರ್ಕಾರಿ ಪದವಿ ಕಾಲೇಜ್ನಲ್ಲಿ 4, ಅಂಕೋಲಾದಲ್ಲಿ 93, ಭಟ್ಕಳದಲ್ಲಿ 6, ಶಿರಸಿಯಲ್ಲಿ 30, ದಾಂಡೇಲಿಯಲ್ಲಿ 45, ಹಳಿಯಾಳದಲ್ಲಿ 50 ವಿದ್ಯಾರ್ಥಿಗಳು ಮಾತ್ರ ತರಗತಿಗೆ ಹಾಜರಾಗಿದ್ದಾರೆ. ಕಾರವಾರ ಮಹಿಳಾ ಕಾಲೇಜ್, ಕುಮಟಾ, ಹೊನ್ನಾವರ, ಬಾಡ, ಮಂಕಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಜೊಯಿಡಾ ಸರ್ಕಾರಿ ಪದವಿ ಕಾಲೇಜ್ಗಳಲ್ಲಿ ಒಬ್ಬರೂ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿಲ್ಲ.
ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯ ಎಂದು ಸರ್ಕಾರ ಹೇಳಿಲ್ಲ. ಆನ್ಲೈನ್ ತರಗತಿ ಕೂಡ ಚಾಲ್ತಿಯಲ್ಲಿದೆ. ಎಲ್ಲ ವಿದ್ಯಾರ್ಥಿಗಳ ಕೋವಿಡ್ ಪರೀಕ್ಷಾ ವರದಿ ಇದುವರೆಗೂ ಬಂದಿಲ್ಲ. ನಮ್ಮ ಕಾಲೇಜ್ನಲ್ಲಿ ಇದುವರೆಗೆ 135 ವಿದ್ಯಾರ್ಥಿಗಳ ಕೋವಿಡ್ ವರದಿ ಬಂದಿದೆ. 80 ಜನರ ಪಟ್ಟಿಯನ್ನು ಶುಕ್ರವಾರ ಕಳಿಸಲಾಗಿದೆ. | ಕಲ್ಪನಾ ಕೆರವಡಿಕರ್ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜ್ ಪ್ರಾಂಶುಪಾಲೆ
ಎಂಜಿಸಿ ಕಾಲೇಜ್ನಲ್ಲಿ ಟೆಸ್ಟ್: ಸಿದ್ದಾಪುರ ಪಟ್ಟಣದ ಎಂಜಿಸಿ ಮಹಾವಿದ್ಯಾಲಯದಲ್ಲಿ ಆರೋಗ್ಯ ಇಲಾಖೆಯಿಂದ ಮಹಾವಿದ್ಯಾಲಯದ 21 ಸಿಬ್ಬಂದಿಗೆ ಹಾಗೂ ಪದವಿ ತರಗತಿಯ 47ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಲಾಯಿತು. ಕೋವಿಡ್ ಟೆಸ್ಟ್ ವರದಿ ನೆಗೆಟಿವ್ ಬಂದವರು ಮಾತ್ರ ಕಾಲೇಜ್ಗೆ ಹಾಜರಾಗಬೇಕು. ರೋಗದ ಲಕ್ಷಣಗಳು ಕಂಡುಬಂದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದ ನಂತರ ಕಾಲೇಜಿಗೆ ಬರುವಂತೆ ಮಹಾವಿದ್ಯಾಲಯ ಸೂಚಿಸಿದೆ.
ಮೂವರಿಗೆ ಪಾಸಿಟಿವ್ : ಕಾಲೇಜ್ನ 2970 ಹಾಗೂ 589 ಸಿಬ್ಬಂದಿಯ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. ಅದರಲ್ಲಿ ಅಂಕೋಲಾದಲ್ಲಿ 2 ಹಾಗೂ ಕುಮಟಾದಲ್ಲಿ 1 ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.