ಆಫ್‌ರೋಡ್‌ನಲ್ಲಿ ರೋಮಾಂಚನ ಡ್ರೈವ್

kpp sports
ಕೊಪ್ಪ ಸ್ಪೋರ್ಟ್ಸ್ ಕ್ಲಬ್‌ನಿಂದ ಹಮ್ಮಿಕೊಂಡಿದ್ದ ಮಲ್ನಾಡ್ ಇಕೋ ಡ್ರೈವ್‌ನಲ್ಲಿ ಜೀಪ್ ಚಲಾಯಿಸುತ್ತಿರುವುದು.
Published on

ಕೊಪ್ಪ: ಭತ್ತದ ಗದ್ದೆ, ಅಡಕೆ ತೋಟ, ಹಳ್ಳ, ಕೃಷಿ ಜಮೀನುಗಳಲ್ಲಿ ನಿರ್ಮಿಸಿದ್ದ ಟ್ರಂಚ್‌ನಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದ್ದಾಗ 4*4 ವಾಹನಗಳಲ್ಲಿ ಸಂತೋಷದಾಯಕ ಡ್ರೈವ್ ರೋಮಾಂಚನಕಾರಿಯಾಗಿತ್ತು, ನೋಡುಗರನ್ನು ನಿಬ್ಬೆರಗಾಗಿಸಿತು.

ಹಿರೇಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿಕಲ್, ಅಸೂಡಿ, ದೊರಗಲ್ಲು, ಶೆಟ್ಟಿಹಡ್ಲು, ಗಣಪತಿಕಟ್ಟೆ, ಕವಡೆಕಟ್ಟೆ, ಬಿಳುವಿನಕೊಪ್ಪ, ಮಾದಲು, ಹೊಸ್ಕೇರಿ ಮುಂತಾದ ಗ್ರಾಮಗಳಲ್ಲಿ ಕೊಪ್ಪ ಸ್ಪೋರ್ಟ್ಸ್ ಕ್ಲಬ್‌ನಿಂದ ಶನಿವಾರ ಎಂಟನೇ ವರ್ಷದ ಮಲ್ನಾಡ್ ಇಕೋ ಡ್ರೈವ್ ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯರು, ಮಂಗಳೂರು, ಬೆಂಗಳೂರು, ಮೈಸೂರು, ಚೆನ್ನೈ, ಯುಎಸ್‌ಎಯಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಶಾಂತಿ ಹೆಗ್ಡೆ ಹಾಗೂ ಕಾಂತಾರ ಚಿತ್ರದ ನಟ ಪ್ರಮೋದ್ ಶೆಟ್ಟಿ ಕೂಡ ಭಾಗವಹಿಸಿದ್ದರು.

ಉದ್ಯಮಿ ವಿಶ್ವನಾಥ್ ಗದ್ದೆಮನೆ ಇಕೋ ಡ್ರೈವ್‌ಗೆ ಹಸಿರು ನಿಶಾನೆ ತೋರಿಸಿದರು. ರೈಡ್‌ನಲ್ಲಿ 120ಕ್ಕೂ ಹೆಚ್ಚು ವಾಹನಗಳಲ್ಲಿ ಡ್ರೈವ್‌ನ ಆಸಕ್ತರು ಭಾಗಿಯಾಗಿದ್ದರು. ಹಳ್ಳ, ತೋಟದಲ್ಲಿ ನಿರ್ಮಿಸಿದ್ದ ದಿಬ್ಬ, ಆಳವಾದ ಗುಂಡಿಯಲ್ಲಿ ವಾಹನ ಚಲಾಯಿಸುವುದು ಸವಾಲಾಗಿತ್ತು. ಈ ವೇಳೆ ಕೆಲ ವಾಹನಗಳು ಕೆಸರಿನ ಗುಂಡಿಯಲ್ಲಿ ಜಖಂಗೊಂಡವು. ಅಂಥ ವಾಹನಗಳನ್ನು ಟ್ರಾೃಕ್ಟರ್‌ಗಳನ್ನು ಬಳಸಿ ಎತ್ತಲಾಯಿತು.

ಹಲವರು ಕುಟುಂಬ ಸಮೇತರಾಗಿ ಡ್ರೈವ್‌ನಲ್ಲಿ ಭಾಗಿಯಾಗಿ ವಾರಾಂತ್ಯವನ್ನು ಸಂತೋಷದಿಂದ ಕಳೆದರು. ಇನ್ನು ಕೆಲವರು ಸ್ನೇಹಿತರ ಜತೆ ತಂಡ ಕಟ್ಟಿಕೊಂಡು ಬಂದಿದ್ದರು. ಕೆಲವರು ಒಂಟಿಯಾಗಿ ಭಾಗವಹಿಸಿದ್ದರು. ಇದರ ನಡುವೆ ಮಹಿಳೆಯರೂ ಪುರುಷರ ಜತೆಯಲ್ಲಿ ಡ್ರೈವ್ ಮಾಡಿ ಸೈಎನಿಸಿಕೊಂಡರು.

ಸ್ಪರ್ಧೆ ಕುರಿತು ಕೊಪ್ಪ ಸ್ಪೋರ್ಟ್ಸ್ ಕ್ಲಬ್ ಗೌರವಾಧ್ಯಕ್ಷ ಪೃಥ್ವಿರಾಜ್ ಕೌರಿ ವಿಜಯವಾಣಿ ಜತೆ ಮಾತನಾಡಿ, ಸತತ ಎಂಟನೇ ವರ್ಷ ಇಕೋ ಡ್ರೈವ್ ಹಮ್ಮಿಕೊಂಡಿದ್ದೇವೆ. ಈ ಭಾಗದ ರೈತರು, ಸಾರ್ವಜನಿಕರು ಸಹಕಾರ ನೀಡಿದ್ದರಿಂದ ಯಶಸ್ವಿಯಾಗಿದೆ. ಪರಿಸರ, ಅರಣ್ಯ ಪ್ರದೇಶದಲ್ಲಿ ಡ್ರೈವ್ ನಡೆಸದೆ ಕೃಷಿಕರ ಹಿಡುವಳಿ ಪ್ರದೇಶದಲ್ಲಿ ಮಾತ್ರ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಭಾಗದಿಂದ ಜನರು ಆಗಮಿಸಿ ದ್ದಾರೆ ಎಂದರು.

ಅನಿವಾಸಿ ಭಾರತೀಯರಾದ ಶಾಂತಿ ಹೆಗ್ಡೆ ಮಾತನಾಡಿ, ನಾನು ಯುಎಸ್ ಪ್ರಜೆಯಾಗಿದ್ದೇನೆ. ಮಂಗಳೂರಿಗೆ ಬಂದಿದ್ದೆ. ಮೊದಲ ಬಾರಿಗೆ ಇಕೋ ಡ್ರೈವ್‌ನಲ್ಲಿ ಸ್ನೇಹಿತರ ಜತೆ ಭಾಗಿಯಾಗಿದ್ದೇನೆ. ತುಂಬ ಸಂತೋಷವಾಗಿದೆ. ಚೆಂದದ ವಾತಾವರಣವಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net