

ಮೈಸೂರು: ಆಪರೇಷನ್ ಹಸ್ತ ಮಾಡುತ್ತಿಲ್ಲ. ನಾವಾಗಿಯೇ ಯಾರನ್ನೂ ಪಕ್ಷಕ್ಕೆ ಕರೆತರುವ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಆಪರೇಷನ್ ಹಸ್ತ ಮಾಡುತ್ತಿಲ್ಲ. ಅವರಾಗಿಯೇ ಪಕ್ಷಕ್ಕೆ ಬರುತ್ತೇವೆಂದು ಹೇಳುತ್ತಿದ್ದಾರೆ. ಹಾಗೆ ಬರುವವರಿಗೆ ಸ್ವಾಗತ ಕೋರಲಾಗುತ್ತಿದೆ ಎಂದರು.
ತಮ್ಮ ಭವಿಷ್ಯ ಮತ್ತು ಕಾಂಗ್ರೆಸ್ ಪಕ್ಷದ ವರ್ಚಸ್ಸು ಎಲ್ಲವನ್ನೂ ಗಮನಿಸಿಕೊಂಡು ಅವರೇ ನಿರ್ಧಾರ ಮಾಡುತ್ತಿದ್ದಾರೆ. ಎಷ್ಟು ಜನ ಬರುತ್ತಾರೆ ಎಂಬುದನ್ನು ಈಗಲೇ ನಾನು ಹೇಳಲು ಸಾಧ್ಯವಿಲ್ಲ. ಎಲ್ಲದಕ್ಕೂ ಕಾಲ, ಘಳಿಗೆ ಎಂಬುದು ಇರುತ್ತದೆ. ಅದು ಬಂದಾಗ ಎಲ್ಲವೂ ನಡೆಯುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್‌ಗೆ ಸೆಳೆಯುವ ಪ್ರಯತ್ನ ಆಗಿದೆ ಎಂಬ ಕುರಿತು ಪ್ರತಿಕ್ರಿಯಿಸಿದ ಅವರು, ಇಂತಹ ಮಾತುಗಳನ್ನು ನಾನು ಹೇಳುತ್ತಾ ಹೋದರೆ ಅದು ಬಹಳ ದೊಡ್ಡದಾಗುತ್ತದೆ. ಈಗ ಅದರ ಬಗ್ಗೆ ಚರ್ಚೆ ಬೇಡ ಎಂದರು.
ಸ್ಥಳ ಬದಲಾವಣೆಗೆ ರಾಜಕೀಯ ಕಾರಣವಿಲ್ಲ:
ಗೃಹಲಕ್ಷ್ಮೀ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ಬೆಳಗಾವಿಯಿಂದ ಮೈಸೂರಿಗೆ ಸ್ಥಳಾಂತರ ಮಾಡಿರುವುದರಲ್ಲಿ ಯಾವ ರಾಜಕೀಯವೂ ಇಲ್ಲ. ಬೆಳಗಾವಿಯಲ್ಲಿ ಮುಂದೆ ಇನ್ನೊಂದು ಕಾರ್ಯಕ್ರಮ ಮಾಡಲು ಯೋಜನೆ ರೂಪಿಸಲಾಗಿದೆ. ಎಲ್ಲರ ಒಮ್ಮತದ ತೀರ್ಮಾನದಿಂದ ಮೈಸೂರಿನಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಡಿಕೆಶಿ ತಿಳಿಸಿದರು.
ಬೆಂಗಳೂರಿನಲ್ಲೂ ಕಾರ್ಯಕ್ರಮ ಮಾಡುವ ಯೋಚನೆ ಮಾಡಲಾಗಿತ್ತು. ಆದರೆ, ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆಂಬ ಕಾರಣಕ್ಕೆ ಅಲ್ಲಿಯೂ ಮಾಡಲಿಲ್ಲ ಎಂದು ಹೇಳಿದರು.
ಮೈಸೂರಿನಲ್ಲಿ ಅನ್ನಭಾಗ್ಯ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ಮಾಡುವ ಉದ್ದೇಶವಿತ್ತು. ಆದರೆ ಅಕ್ಕಿ ವಿಚಾರದಲ್ಲಿ ಒಂದಷ್ಟು ಅಡೆತಡೆ ಇದೆ. ಹೀಗಾಗಿ, ಗೃಹಲಕ್ಷ್ಮೀ ಯೋಜನೆಯನ್ನು ಇಲ್ಲಿಂದ ಆರಂಭಿಸಲು ಮುಂದಾಗಿದ್ದು, ಆ. 30ರಂದು ಒಂದು ಬಟನ್ ಒತ್ತಿದ ಕೂಡಲೇ ಎಲ್ಲ ಫಲಾನುಭವಿಗಳಿಗೆ ಹಣ ಸಂದಾಯವಾಗುತ್ತದೆ. ಅದರ ಮೆಸೇಜ್ ಅವರ ಮೊಬೈಲ್‌ಗಳಿಗೆ ರವಾನೆ ಆಗಲಿದೆ. ನಮ್ಮಲ್ಲಿ ಹಣದ ಕೊರತೆ ಇಲ್ಲ. ಎಲ್ಲ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಸರ್ವರ್ ಸಮಸ್ಯೆಯಾದರೆ ಒಂದಷ್ಟು ಜನರಿಗೆ ಹಣ ಬರುವುದು ತಡವಾಗಬಹುದಷ್ಟೇ ಎಂದರು.
ಮೋದಿ ಈಗ ಏನು ಹೇಳುತ್ತಾರೆ?
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದರು. ಆದರೆ ಇದೀಗ ಮಧ್ಯಪ್ರದೇಶದ ಅವರದೇ ಸರ್ಕಾರ ನಮ್ಮನ್ನು ನೋಡಿ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದೆ. ಇದಕ್ಕೆ ಮೋದಿ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ ಡಿ.ಕೆ.ಶಿವಕುಮಾರ್, ದೇಶದ ಎಲ್ಲ ಕಡೆಯೂ ನಮ್ಮ ಗ್ಯಾರಂಟಿ ಯೋಜನೆಗಳು ಸದ್ದು ಮಾಡುತ್ತಿವೆ ಎಂದರು.