

ಹಾಸನ: ಭಾರತದ ಮುಕುಟ ಮಣಿ ಜಮ್ಕು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 26 ಮಂದಿ ಅಮಾಯಕರ ಬಲಿ ಪಡೆದ ಉಗ್ರರ ಅಡಗುದಾಣಗಳ ಮೇಲೆ ನಮ್ಮ ದೇಶದ ಹೆಮ್ಮೆಯ ಸೈನಿಕರು ನಡೆಸಿರುವ ಆಪರೇಷನ್ ಸಿಂಧೂರ ಹೆಸರಿನ ಪ್ರತೀಕಾರದ ದಾಳಿ ಸ್ವಾಗತಾರ್ಹ ಎಂದು ಸ್ಥಳೀಯ ಶಾಸಕ ಎಚ್.ಪಿ.ಸ್ಚರೂಪ್ ಪ್ರಕಾಶ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರನ್ನು ಪೋಷಿಸಿ ಅಮಾಯಕರ ರಕ್ತ ಹೀರಲು ಪ್ರೋತ್ಸಾಹಿಸುತ್ತಿರುವ ಪಾಕಿಸ್ತಾನದೊಳಗ್ಗೆ ನುಗ್ಗಿ ಭಯೋತ್ಪಾದಕರನ್ನು ಸದೆ ಬಡಿದಿರುವ ಯೋಧರ ಧೈರ್ಯ ಸಾಹಸಕ್ಕೆ ದೊಡ್ಡದೊಂದು ಸಲಾಂ. ಆಪರೇಷನ್ ಸಿಂಧೂರ್ ಇದು ಕೇವಲ ಒಂದು ದಾಳಿಯಲ್ಲ. ಇದು ಹಣೆಯ ಮೇಲೆ ಹಚ್ಚಿದ ರಾಷ್ಟ್ರೀಯ ಸಿಂಧೂರ. ನಮ್ಮ ದೇಶದ 26 ಮಹಿಳೆಯರ ಕುಂಕುಮ ಅಳಿಸಿದಕ್ಕೆ ಪ್ರತೀಕಾರವಾಗಿ ನಮ್ಮ ಯೋಧರು ಹಾಗೂ ಕೇಂದ್ರ ಸರ್ಕಾರ ಸರಿಯಾಗಿಯೇ ಮರ್ಮಾಘಾತ ಕೊಟ್ಟಿದೆ. ಈ ಮೂಲಕ ನಿದ್ರೆಯಲ್ಲೂ ಪಾಕಿಸ್ತಾನ ನಡುಗುವಂತೆ ನಮ್ಮ ಯೋಧರು ಕರ್ತವ್ಯ ಮೆರೆದಿದ್ದಾರೆ. ಇದಕ್ಕಾಗಿ ನಮ್ಮ ಹೆಮ್ಮೆಯ ಯೋಧರು ಮತ್ತು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ ಎಂದರು.
ಭಾರತೀಯ ಸೇನೆಯ ಧೈರ್ಯ ಮತ್ತು ಪ್ರಧಾನಿ ನರೇಂದ್ರ ಮೋದಿಜೀ ಅವರ ನಿರ್ಭೀತ ನಾಯಕತ್ವಕ್ಕೆ ನನ್ನ ಮತ್ತು ನಮ್ಮ ಪಕ್ಷದ ನಮನಗಳು. ಈಗಾಗಲೇ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು, ಉಗ್ರರು ಹಾಗೂ ಉಗ್ರವಾದದ ದಮನ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಎಲ್ಲ ಕ್ರಮಗಳನ್ನು ಸ್ವಾಗತಿಸಿ, ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ನಾನು ಕೂಡ ಅದಕ್ಕೆ ಬದ್ಧನಾಗಿದ್ದೇನೆ ಎಂದು ತಿಳಿಸಿದರು.
ಪದೇಪದೆ ಭಾರತದ ಮೇಲೆ ರಕ್ತಕಾರುವ ಪಾಕಿಸ್ತಾನಕ್ಕೆ ನಮ್ಮ ಮೂರೂ ಸೇನೆಗಳ ಯೋಧರು ತಕ್ಕ ಪಾಠ ಕಲಿಸಿದ್ದಾರೆ. ಇನ್ನಾದರೂ ಪಾಕಿಸ್ತಾನ ಉಗ್ರ ನಿಲುವು ಬಿಟ್ಟು ಶಾಂತಿ-ಸಹಬಾಳ್ವೆಗಾಗಿ ಶ್ರಮಿಸಲಿ, ಇಲ್ಲದಿದ್ದರೆ ನವಭಾರತ ಕೇವಲ ಎಚ್ಚರಿಸುವುದಷ್ಟೇ ಅಲ್ಲ, ಯುದ್ಧ ಸೇರಿದಂತೆ ಎಲ್ಲದಕ್ಕೂ ಸನ್ನದ್ಧವಾಗಿ ಅದು ತನ್ನ ಕರ್ತವ್ಯ ನಿರ್ವಹಿಸುತ್ತದೆ. ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಮುಂದೆಯೂ ಯಶಸ್ಸು ಸಿಗಲಿ ಎಂದು ಈ ಮೂಲಕ ಶುಭ ಹಾರೈಸಿದ್ದಾರೆ.