

ಚಿಕ್ಕಬಳ್ಳಾಪುರ : ರಾಷ್ಟ್ರೀಯ ಮತದಾನ ದಿನಾಚರಣೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆನ್‌ಲೈನ್ ಮೂಲಕ ನಡೆಸಲು ಜಿಪಂ ಸಿಇಒ ಪಿ.ಶಿವಶಂಕರ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಗೆ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಚಟುವಟಿಕೆ ಕೈಗೊಳ್ಳುವ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮತದಾರ ಜಾಗೃತಿ ಚಟುವಟಿಕೆಯಲ್ಲಿ ಶಾಲಾ ಕಾಲೇಜು ಹಂತದ ಮತದಾರರ ಸಾಕ್ಷರತಾ ಕ್ಲಬ್‌ಗಳು ಪರಿಣಾಮಕಾರಿಯಾಗಿವೆ. ಪ್ರಸ್ತುತ ಕರೊನಾ ಹಿನ್ನೆಲೆಯಲ್ಲಿ ತರಗತಿಗಳು ಇಲ್ಲಿಯವರೆಗೆ ಪ್ರಾರಂಭವಾಗಿರಲಿಲ್ಲ. ಇದಕ್ಕೆ ವಿವಿಧ ತಂತ್ರಜ್ಞಾನಗಳ ಮೂಲಕ ಅರಿವು ಮೂಡಿಸಬೇಕು ಎಂದರು.
ಶಾಲೆ, ಪದವಿ ಪೂರ್ವ ಕಾಲೇಜು ತಾಂತ್ರಿಕ ಶಿಕ್ಷಣ ಕಾಲೇಜುಗಳು ಪದವಿ ಸ್ನಾತಕೋತ್ತರ ಪದವಿ ಇಂಜಿನಿಯರಿಂಗ್ ವಿಶ್ವವಿದ್ಯಾಲಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿವಿಧ ಹಂತದಲ್ಲಿ ಪ್ರಬಂಧ ಸ್ಪರ್ಧೆ, ಭಿತ್ತಿಪತ್ರ ಕೊಲಾಜ್ ಮತ್ತು ರಸಪ್ರಶ್ನೆ ಸ್ಪರ್ಧೆ ವಿವಿಧ ಚಟುವಟಿಕೆ ಕೈಗೊಳ್ಳಲಾಗುವುದು. 18 ರಿಂದ 20 ವರ್ಷದವರನ್ನು ಮತದಾರರ ಪಟ್ಟಿಗೆ ಸೇರಿಸಬೇಕು. ಮತದಾನದಲ್ಲಿ ನೋಟಾ ಉಪಯೋಗ, ಸುಗಮ ಮತದಾನದ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದು ತಿಳಿಸಿದರು.
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಎಲ್ಲ ಗ್ರಾ.ಪಂ.ಗಳಲ್ಲಿ ಟಾಂಟಾಂ ಮೂಲಕ ಪ್ರಚಾರ ಕೈಗೊಳ್ಳಲು ಇಒಗಳಿಗೆ ಸೂಚಿಸಿದರು.ಸ್ವೀಪ್ ರಾಜ್ಯ ಸಂಪನ್ಮೂಲ ವ್ಯಕ್ತಿ ಸತೀಶ್ ಕುಮಾರ್ ಮಾತನಾಡಿ, ಮತದಾರ ಸಾಕ್ಷರತಾ ಚಟುವಟಿಕೆಯನ್ನು ಆನ್‌ಲೈನ್ ಮೂಲಕ ನಡೆಸುವ ಕುರಿತ ಮಾಹಿತಿಯನ್ನು ಸಭೆಗೆ ನೀಡಿದರು.