ಆನ್‌ಲೈನ್ ತರಗತಿಗಳಿಂದ ಕಲಿಕೆ ಸರಳ; ಪ್ರಾಂಶುಪಾಲ ವೀರಭದ್ರಸ್ವಾಮಿ ಅಭಿಮತ ಶ್ರೀ ಸಿದ್ಧಗಂಗಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶೇಷ ತರಗತಿ

11 Nela Ph 01 Online class Udgatane
Published on

ನೆಲಮಂಗಲ: ವಿದ್ಯಾರ್ಥಿಗಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ಸಕ್ರಿಯಗೊಳಿಸಲು ಆನ್‌ಲೈನ್ ತರಗತಿಗಳು ಸಹಕಾರಿ ಎಂದು ಪ್ರಾಂಶುಪಾಲ ಎಚ್.ವಿ.ವೀರಭದ್ರಸ್ವಾಮಿ ಅಭಿಪ್ರಾಯಪಟ್ಟರು.

ತಾಲೂಕಿನ ಸೊಂಡೇಕೊಪ್ಪ ರಸ್ತೆಯಲ್ಲಿ ಶ್ರೀ ಸಿದ್ಧಗಂಗಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆನ್‌ಲೈನ್ ತರಗತಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಕರೊನಾ ವೈರಸ್ ಸೋಂಕು ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ತಲ್ಲಣಗೊಳಿಸಿರುವುದು ಒಂದೆಡೆಯಾದರೆ ಜಗತ್ತಿನ ಆರ್ಥಿಕತೆ ಹಾಗೂ ಶಿಕ್ಷಣ ಕ್ಷೇತ್ರದ ಮೇಲೂ ಕೆಟ್ಟ ಪರಿಣಾಮವನ್ನುಂಟು ಮಾಡಿದೆ. ಇಂತಹ ಸಂದಿಗ್ಧ ಪರಿಸ್ಥಿತಿ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡುವುದು, ಪರೀಕ್ಷೆ ನಡೆಸುವ ಕುರಿತಾದ ಅನೇಕ ಪ್ರಶ್ನೆಗಳು ಶಿಕ್ಷಣ ತಜ್ಞರು, ಸರ್ಕಾರ ಮತ್ತು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳನ್ನು ಕಾಡುತ್ತಿವೆ ಎಂದರು.

ರಾಜ್ಯ ಮತ್ತು ದೇಶದ ಕೋಟ್ಯಂತರ ಸಂಖ್ಯೆಯ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ನಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ಕಲಿಕೆ ಪ್ರಕ್ರಿಯೆಗೆ ಒಳಪಡಿಸುವುದು, ಪರೀಕ್ಷೆಗೆ ಸಜ್ಜುಗೊಳಿಸುವುದು ಸೇರಿ ಶಿಕ್ಷಣದಿಂದ ವಂಚಿತರಾಗದಂತೆ ಮುನ್ನೆಚ್ಚರಿಕೆವಹಿಸುವ ಉದ್ದೇಶದಿಂದ ಆನ್‌ಲೈನ್ ತರಗತಿ ಆರಂಭಿಸಲಾಗಿದೆ. ಈಗಾಗಲೇ ಎಲ್ಲ ವಿದ್ಯಾರ್ಥಿಗಳ ಸಂಪರ್ಕ ಸಾಧಿಸಿರುವ ಆಡಳಿತ ಮಂಡಳಿ ಮತ್ತು ಅಧ್ಯಾಪಕರ ತಂಡ ವ್ಯಾಟ್ಸ್‌ಆ್ಯಪ್ ಗ್ರೂಪ್ ಸಿದ್ಧಪಡಿಸಿದ್ದು, ಅಗತ್ಯ ನೋಟ್ಸ್ ವಿನಿಮಯ ಮಾಡಲಾಗಿದೆ. ಪಟ್ಟಣ ಹಾಗೂ ಗ್ರಾಮೀಣಭಾಗದ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮ ಆಯೋಜಕ ಜಿ.ಗಂಗರಾಜು, ಉಪನ್ಯಾಸಕ ಕೆ.ಅಮರೇಂದ್ರ, ಎಚ್.ಶ್ರೀಧರ್‌ಮೂರ್ತಿ, ಎಸ್.ಜಗದಾಂಬಾ, ಬಿ.ಎಂ.ಮಾಲಿನಿ, ಎಲ್.ಚನ್ನಪ್ಪ, ಎಂ.ಉದಯ್‌ಕುಮಾರ್, ಎಚ್.ಎಸ್.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net