ಆನ್​ಲೈನ್​ನಲ್ಲಿ ಇಂಜಿನಿಯರಿಂಗ್ ಪದವಿ ಪರೀಕ್ಷೆ

h29-BE Online 2
Published on

ಸಂತೋಷ ವೈದ್ಯ ಹುಬ್ಬಳ್ಳಿ

ನಗರದ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯವು ಇಂಜಿನಿಯರಿಂಗ್ ಪದವಿ(ಬಿಇ)ಯ ಅಂತಿಮ ವರ್ಷ(8ನೇ ಸೆಮಿಸ್ಟರ್)ದ ವಿದ್ಯಾರ್ಥಿಗಳಿಗೆ ಆನ್​ಲೈನ್​ನಲ್ಲಿ ಪರೀಕ್ಷೆ ತೆಗೆದುಕೊಂಡಿದೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ರಾಜ್ಯದ ವಿವಿಧೆಡೆ ಹಾಗೂ ಹೊರ ರಾಜ್ಯಗಳಲ್ಲಿ ನೆಲೆಸಿರುವ ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತು ಪರೀಕ್ಷೆ ಬರೆಯುತ್ತಿದ್ದಾರೆ.

ಜೂ. 27 ಹಾಗೂ 29ರಂದು ಆನ್​ಲೈನ್​ನಲ್ಲಿ ಪರೀಕ್ಷೆ ನಡೆಸಲಾಗಿದ್ದು, ಎಲ್ಲ 1185 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 805 ಪುರುಷ ವಿದ್ಯಾರ್ಥಿಗಳು ಇದ್ದಾರೆ. ಮೆಕ್ಯಾನಿಕಲ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಸೇರಿ 7 ಕೋರ್ಸ್​ಗಳಲ್ಲಿ ಇಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಥಿಯರಿ ಪರೀಕ್ಷೆಗಳು ಜುಲೈ 1ರವರೆಗೆ ನಡೆಯಲಿವೆ. ಜುಲೈ 2ರಿಂದ 5ರವರೆಗೆ ಪ್ರಾಯೋಗಿಕ ಪರೀಕ್ಷೆಗಳು ನಿಗದಿಯಾಗಿವೆ.

ಆನ್​ಲೈನ್ ಪರೀಕ್ಷೆ ನಡೆಸಲು ಮೈಕ್ರೋಸಾಫ್ಟ್ ಟೀಮ್್ಸ ತಂತ್ರಾಂಶದ ನೆರವು ಪಡೆಯಲಾಗಿದೆ. ಕೆಎಲ್​ಇ ತಾಂತ್ರಿಕ ವಿವಿ ಕ್ಯಾಂಪಸ್​ನಲ್ಲಿರುವ ಸಿ-ಲೈಟ್ ಕಟ್ಟಡದಲ್ಲಿ ಪರೀಕ್ಷಾ ಮೇಲ್ವಿಚಾರಣೆ ಕೊಠಡಿ ಸ್ಥಾಪಿಸಲಾಗಿದೆ. ಇಲ್ಲಿ ಪ್ರತಿಯೊಬ್ಬ ಪರೀಕ್ಷಾ ಮೇಲ್ವಿಚಾರಕರು ಆನ್​ಲೈನ್​ನಲ್ಲಿ ಪರೀಕ್ಷೆ ಬರೆಯುವ ತಲಾ 9 ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಲಿದ್ದಾರೆ. ಪರೀಕ್ಷೆ ಬರೆಯುವ ಮುನ್ನ ವಿದ್ಯಾರ್ಥಿಯ ಹಾಲ್ ಟಿಕೆಟ್ ಹಾಗೂ ಕಾಲೇಜಿನ ಗುರುತಿನ ಚೀಟಿಯನ್ನು ಪರಿಶೀಲಿಸಲಾಗುತ್ತದೆ. ವಿದ್ಯಾರ್ಥಿಯು ಏಕಾಂತ, ಅನುಕೂಲಕರ ಸ್ಥಳದಲ್ಲಿ ಕುಳಿತಿರುವುದನ್ನು ಖಾತರಿ ಪಡಿಸಿಕೊಳ್ಳಲಾಗುತ್ತದೆ. ವಿದ್ಯಾರ್ಥಿಯ ಲ್ಯಾಪ್​ಟಾಪ್ ಅಥವಾ ಕಂಪ್ಯೂಟರ್ ಕ್ಯಾಮರಾವು ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಯ ಮುಖ ಹಾಗೂ ಬರೆಯುವ ಉತ್ತರ ಪತ್ರಿಕೆ ಮೇಲೆ ಸದಾ ಫೋಕಸ್ ಆಗಿರುವಂತೆ ನೋಡಿಕೊಳ್ಳಲಾಗುತ್ತಿದೆ. ಪರೀಕ್ಷಾ ಅವಧಿ ಮುಗಿದ ಕೂಡಲೆ ತಕ್ಷಣ ಉತ್ತರ ಪತ್ರಿಕೆಯನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಎಕ್ಸಾಮ್​ನೆಟ್​ಗೆ ಅಪ್ಲೋಡ್ ಮಾಡಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.

ಕೆಎಲ್​ಇ ತಾಂತ್ರಿಕ ವಿವಿಯು ಸ್ವಾಯತ್ತ ವಿವಿಯಾಗಿದ್ದು, ದೇಶದ ವಿವಿಧೆಡೆಯಿಂದ ಇಂಜಿನಿಯರಿಂಗ್ ವ್ಯಾಸಂಗಕ್ಕೆ ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸುತ್ತಾರೆ. ಲಾಕ್​ಡೌನ್ ಹಿನ್ನೆಲೆಯಲ್ಲಿ ಮನೆ ಸೇರಿಕೊಂಡ ಎಲ್ಲ ಸೆಮಿಸ್ಟರ್​ಗಳ ವಿದ್ಯಾರ್ಥಿಗಳಿಗೆ ಕಳೆದ ಎರಡೂವರೆ ತಿಂಗಳು ಆನ್​ಲೈನ್​ನಲ್ಲಿ ಪಾಠ ಮಾಡಿ ಪಠ್ಯಕ್ರಮವನ್ನು ಪೂರ್ಣಗೊಳಿಸಲಾಗಿದೆ. ಬಿಇ 8ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆನ್​ಲೈನ್​ನಲ್ಲಿ ಅಂತಿಮ ಪರೀಕ್ಷೆ ನಡೆಸುವ ಪೂರ್ವ ಜೂ. 22ರಂದು ಅಣಕು ಆನ್​ಲೈನ್ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷಾ ಮೇಲ್ವಿಚಾರಕರಿಗೆ ಸೂಕ್ತ ತರಬೇತಿ ನೀಡಲಾಗಿದೆ. ಜುಲೈ 9ರಿಂದ 31ರ ವರೆಗೆ 2, 4 ಹಾಗೂ 6 ನೇ ಸೆಮಿಸ್ಟರ್ ಆನ್​ಲೈನ್ ಪರೀಕ್ಷೆಗಳು ನಿಗದಿಯಾಗಿವೆ. ಇವರಿಗೂ ಅಣಕು ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಬಹುತೇಕ ವಿದ್ಯಾರ್ಥಿಗಳು ಅನ್​ಲೈನ್​ನಲ್ಲಿ ಕೈ ಬರಹದಲ್ಲಿಯೇ ಉತ್ತರ ಬರೆಯುವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ರೇಖಾ ಚಿತ್ರ, ಚಿತ್ರ ಬಿಡಿಸುವುದು ಇತ್ಯಾದಿ ಕಂಪ್ಯೂಟರ್ ಬರವಣಿಗೆಯಲ್ಲಿ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಗಲಿಬಿಲಿಗೆ ಒಳಗಾಗದೇ ಸಮಚಿತ್ತದಿಂದ ಪರೀಕ್ಷೆ ಬರೆಯುವಂಥ ವಾತಾವರಣ ನಿರ್ವಿುಸಿದ್ದೇವೆ. ಗ್ರಾಮೀಣ ಭಾಗದಲ್ಲಿ ನೆಟ್​ವರ್ಕ್ ಸಮಸ್ಯೆ ಇರುವುದರಿಂದ ಉತ್ತರ ಪತ್ರಿಕೆಯನ್ನು ಅಪ್ಲೋಡ್ ಮಾಡಲು ಹೆಚ್ಚುವರಿ ಸಮಯ ನೀಡಲಾಗಿದೆ. | ಡಾ. ಅನಿಲಕುಮಾರ ನಂದಿ, ಪರೀಕ್ಷಾ ನಿಯಂತ್ರಕರು, ಕೆಎಲ್​ಇ ತಾಂತ್ರಿಕ ವಿವಿ, ಹುಬ್ಬಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net