ಆನ್​ಲೈನ್ ಪರೀಕ್ಷೆ ಪದ್ಧತಿ ರದ್ದುಪಡಿಸಿ

h10-AIDYO
Published on

ಹುಬ್ಬಳ್ಳಿ: ಐಟಿಐ ವಿದ್ಯಾರ್ಥಿಗಳಿಗೆ ಆನ್​ಲೈನ್ ಪರೀಕ್ಷೆ ಪದ್ಧತಿ ರದ್ದುಗೊಳಿಸಲು ಆಗ್ರಹಿಸಿ ಹಾಗೂ ಪರೀಕ್ಷೆ ಶುಲ್ಕಕ್ಕೆ ಜಿ.ಎಸ್.ಟಿ. ವಿಧಿಸಿರುವುದನ್ನು ವಿರೋಧಿಸಿ ಎಐಡಿವೈಒ (ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಶನ್) ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಎಐಡಿವೈಒ ಜಿಲ್ಲಾಧ್ಯಕ್ಷ ಭವಾನಿಶಂಕರ್ ಎಸ್.ಗೌಡ ಮಾತನಾಡಿ, ಆನ್​ಲೈನ್ ಪರೀಕ್ಷೆ ಪದ್ಧತಿಯು ಲಕ್ಷಾಂತರ ಐಟಿಐ ತರಬೇತಿ ಪಡೆಯುತ್ತಿರುವವರು ಮತ್ತು ತರಬೇತಿದಾರರನ್ನು ಗೊಂದಲಕ್ಕೆ ತಳ್ಳಿದೆ. ಜತೆಗೆ ಪರೀಕ್ಷೆ ಶುಲ್ಕಕ್ಕೆ ಜಿಎಸ್​ಟಿ ಹಾಕುವ ಪದ್ಧತಿ ಜಾರಿಗೆ ಬಂದಿರುವುದು ಖಂಡನೀಯ. ಐಟಿಐ ತರಬೇತಿಯು ಕುಶಲತೆ, ಕಾರ್ಯ ಕಲಿಕೆಗೆ ಹೆಚ್ಚು ಒತ್ತು ನೀಡುತ್ತದೆ. ತರಬೇತಿ ಪೂರೈಸಿದವರ ಕಲಿಕೆಯ ಮಟ್ಟ ತುಲನೆ ಮಾಡಲು ಕಾರ್ಯ ಕೌಶಲ ಆಧಾರವಾಗಬೇಕೆ ವಿನಃ ಆನ್​ಲೈನ್ ಪರೀಕ್ಷೆಯಲ್ಲ. ಆದ್ದರಿಂದ ಆನ್​ಲೈನ್ ಪರೀಕ್ಷೆ ಕೈಬಿಡಬೇಕು ಎಂದು ಒತ್ತಾಯಿಸಿದರು.

ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಹನುಮೇಶ ಹುಡೇದ ಮಾತನಾಡಿದರು. ತಹಸೀಲ್ದಾರ್ ಮುಖಾಂತರ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಕೊಟ್ರೇಶ ಹುಬ್ಬಳ್ಳಿ, ಸಂಘಟನಾಕಾರರಾದ ಶರಣು ಬಸವ ಪಾಟೀಲ, ರಾಜು ಗಾಣಿಗೆ, ಬಸವರಾಜು, ಪ್ರಮೋದ, ಸಿದ್ಧಾರೂಢ, ಪುನೀತ, ಇತರರು ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net