ಆನ್‌ಲೈನ್ ವ್ಯವಹಾರದ ಕುರಿತು ಜಾಗೃತಿ ಅಗತ್ಯ

16
Published on

ಮೈಸೂರು: ಆನ್‌ಲೈನ್ ವ್ಯವಹಾರದ ಕುರಿತು ಗ್ರಾಹಕರು ಹೆಚ್ಚಿನ ಜಾಗ್ರತೆ ವಹಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ಹೇಳಿದರು.

ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ ಕುವೆಂಪುನಗರದಲ್ಲಿರುವ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಹಕರು ಮತ್ತು ವರ್ತಕರ ನಡುವಿನ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವ ಆನ್‌ಲೈನ್ ವ್ಯವಸ್ಥೆಯಿಂದ ಎಡವಟ್ಟುಗಳು ಆಗಬಹುದು. ಗ್ರಾಹಕರಿಗೆ ಮೋಸ, ವಂಚನೆಯೂ ಆಗಬಹುದು. ಆದ್ದರಿಂದ ಇ-ವ್ಯವಹಾರದ ಕುರಿತು ಹೆಚ್ಚಿನ ನಿಗಾ ವಹಿಸಬೇಕು ಎಂದರು.

ದಿನಸಿ ಅಂಗಡಿ, ಮಾರುಕಟ್ಟೆ ಸೇರಿದಂತೆ ಇನ್ನಿತರ ಕಡೆ ನಾವೇ ಖುದ್ದಾಗಿ ಭೇಟಿ ನೀಡಿ ವಸ್ತುಗಳನ್ನು ಪರಿಶೀಲಿಸಿ ಖರೀದಿ ಮಾಡುತ್ತೇವೆ. ಆದರೆ, ಆನ್‌ಲೈನ್ ವ್ಯವಹಾರದಲ್ಲಿ ಇದು ಸಾಧ್ಯವಿಲ್ಲ. ಚಿತ್ರ ನೋಡಿ ವಸ್ತುವನ್ನು ಕೊಳ್ಳಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಕಳಪೆ ವಸ್ತುಗಳು ನೀಡಿ ಮೋಸ ಮಾಡುವ ಸಾಧ್ಯತೆ ಇರುತ್ತದೆ. ಆಗ ಗ್ರಾಹಕರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿ ಪರಿಹಾರ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.


ಖರೀದಿ ಮಾಡಿದ ವಸ್ತುಗಳ ಕುರಿತು ಗ್ರಾಹಕರು ಮೋಸಕ್ಕೆ ಒಳಗಾದರೂ ಬಹಳಷ್ಟು ಜನರು ದೂರು ನೀಡದೆ ಸುಮ್ಮನಾಗಿ ಬಿಡುತ್ತಾರೆ. ಕೆಲವರಿಗೆ ಜಾಗೃತಿಯ ಅರಿವಿದ್ದರೂ ದೂರು ನೀಡಲು ಹಿಂಜರಿಯುತ್ತಾರೆ. ಇದು ಸರಿಯಲ್ಲ. 10 ರೂ. ವಸ್ತುವಾದರೂ ಸರಿಯೇ. ಆ ಕುರಿತು ದೂರು ನೀಡಿ ಪರಿಹಾರ ಪಡೆದುಕೊಳ್ಳಬೇಕು. ಇದು ಪ್ರತಿಯೊಬ್ಬ ಗ್ರಾಹಕರ ಹಕ್ಕು ಎಂದರು.


ಗ್ರಾಹಕರಲ್ಲಿ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 15ರಂದು ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನು ಆಚರಿಸಲಾಗುತ್ತದೆ. ಅಮೆರಿಕದ ಜಾನ್ ಎಫ್.ಕೆನಡಿ ಅವರು 1962ರ ಮಾರ್ಚ್ 15ರಂದು ಗ್ರಾಹಕರ ಹಕ್ಕುಗಳ ಕುರಿತು ಪ್ರತಿಪಾದನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ದಿನನ್ನು ಆಚರಣೆ ಮಾಡಲಾಗುತ್ತಿದೆ. ದೇಶದಲ್ಲಿ ಮೊದಲ ಬಾರಿ 1986ರಲ್ಲಿ ಗ್ರಾಹಕರ ಕಾಯ್ದೆ ಜಾರಿ ಬಂದಿತ್ತು. ಇದಕ್ಕೆ 1992ರಲ್ಲಿ ತಿದ್ದುಪಡಿ ಮಾಡಿ ಹೊಸ ಕಾಯ್ದೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಗ್ರಾಹಕರ ಸುರಕ್ಷತೆ ಕಾಯ್ದೆಯ ಪ್ರಕಾರ ಗ್ರಾಹಕರಾಗಿ ಯಾವುದೇ ವಸ್ತು ಖರೀದಿಸುವಾಗ ವಸ್ತುವಿನ ಗುಣಮಟ್ಟ, ಸುರಕ್ಷತೆ, ವಸ್ತುವಿನ ಉತ್ಪಾದನೆ ಮತ್ತು ಅದರ ಕೊನೆಯ ಅವಧಿಯನ್ನು ಪರಿಶೀಲಿಸಬೇಕು ಎಂದು ಹೇಳಿದರು.


ಆಹಾರ ಇಲಾಖೆಯ ಜಂಟಿ ನಿರ್ದೇಶಕಿ ಕುಮುದಾ ಶರತ್ ಮಾತನಾಡಿದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಎಂ.ಕೆ.ನವೀನ್‌ಕುಮಾರಿ, ಸದಸ್ಯ ಮಾರುತಿ ಎಚ್.ವಡ್ಡರ್, ಕಾಲೇಜಿನ ಮುಖ್ಯಕಾರ್ಯನಿರ್ವಾಹಕ ಕೆ.ಎಸ್.ಸುರೇಶ್, ಪ್ರಾಂಶುಪಾಲ ಡಾ.ಎಸ್.ನಟರಾಜು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net