ಆನ್‌ಲೈನ್ ವಹಿವಾಟು ಎಚ್ಚರಿಕೆಯಿಂದ ವ್ಯವಹರಿಸಿ

Grahaka
Published on

ಚಿತ್ರದುರ್ಗ: ಆನ್‌ಲೈನ್ ವಹಿವಾಟು ಯುವಪೀಳಿಗೆಯ ಮಾರುಕಟ್ಟೆಯಾಗಿದ್ದು, ಇಲ್ಲಿ ವ್ಯವಹರಿಸುವಾಗ ಎಚ್ಚರ ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ನ್ಯಾಯಾಲಯ, ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ನಗರಸಭೆ, ಆಹಾರ, ಗ್ರಾಹಕರ ವ್ಯವಹಾರ, ಕನ್ನಡ ಮತ್ತು ಸಂಸ್ಕೃತಿ, ಕಾನೂನು ಮಾಪನಾಶಾಸ್ತ್ರ ಹಾಗೂ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಸೇರಿ ವಿವಿಧ ಇಲಾಖೆಯಿಂದ ತರಾಸು ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪ್ರತಿ ವಸ್ತುಗಳು ಆನ್‌ಲೈನ್‌ನಲ್ಲಿ ಲಭ್ಯವಿದ್ದು, ಎಲ್ಲ ಕ್ಷೇತ್ರಗಳಲ್ಲೂ ಇದರ ಮಾರುಕಟ್ಟೆ ವಿಸ್ತರಿಸುತ್ತಿದ್ದು, ಸೇವೆ ಒದಗಿಸಲಾಗುತ್ತಿದೆ. ಆದರೂ ಹಲವರಿಗೆ ಅರಿವಿನ ಕೊರತೆ ಇದ್ದು, ಈ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಸುಸ್ಥಿರ ಜೀವನ ಶೈಲಿಗೆ ಸರಳ ಪರಿವರ್ತನೆ ಎಂಬ ಘೋಷವಾಕ್ಯದೊಂದಿಗೆ ಈ ಬಾರಿ ಗ್ರಾಹಕರ ದಿನ ಆಚರಿಸಲಾಗುತ್ತಿದೆ. ವಿಶ್ವದ ಯಾವುದೇ ಮೂಲೆಯಲ್ಲಿರುವ ವಸ್ತುವನ್ನು ಖರೀದಿಸಲು ಆನ್‌ಲೈನ್‌ನಲ್ಲಿ ಅವಕಾಶವಿದೆ. ಆದರೆ, ಗ್ರಾಹಕರು ಎಚ್ಚರಿಕೆಯಿಂದ ಖರೀದಿಸಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಎಚ್.ಎನ್.ಮೀನಾ ಮಾತನಾಡಿ, ಭಾರತದಲ್ಲಿ ಗ್ರಾಹಕರ ಕಾಯ್ದೆ 1986ರಲ್ಲಿ ಜಾರಿಯಾಯಿತು. ತಮಗೆ ಅನ್ಯಾಯ, ಮೋಸವಾದಾಗ ಆಯೋಗಕ್ಕೆ ಅರ್ಜಿ ಸಲ್ಲಿಸಿ, ಪರಿಹಾರ ಹಾಗೂ ನ್ಯಾಯ ಪಡೆಯಬಹುದು ಎಂದು ತಿಳಿಸಿದರು.

ಆಹಾರ ಇಲಾಖೆ ಜಂಟಿ ನಿರ್ದೇಶಕ ಕೆ.ಪಿ.ಮಧುಸೂದನ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಂಪ್ರಾದಾಯಿಕ ವ್ಯವಹಾರ ಪದ್ಧತಿ ಸಂಪೂರ್ಣ ಕಣ್ಮೆರೆಯಾಗಿದ್ದು, ಬದಲಾದ ಆನ್‌ಲೈನ್ ವ್ಯವಸ್ಥೆಗೆ ಅನೇಕರು ಹೊಂದಿಕೊಂಡಿದ್ದಾರೆ. ಇದರಿಂದ ಸಾಕಷ್ಟು ಮೋಸ, ಅನ್ಯಾಯ ಆಗುತ್ತಿದೆ. ಹೀಗಾಗಿ ಗ್ರಾಹಕರಿಗೆ ತಮ್ಮ ಹಕ್ಕುಗಳ ಕುರಿತು ಅರಿವು ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಹೇಳಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಸಿಇಎನ್ ಪೊಲೀಸ್ ಠಾಣೆಯ ಯಶೋಧಾ, ಎಸಿ ಮಹಬೂಬ್ ಜಿಲಾನಿ ಖುರೇಷಿ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್, ಆಹಾರ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಕಾನೂನು ಮಾಪಾನ ಶಾಸ್ತ್ರ ಇಲಾಖೆಯ ಹಿರಿಯ ನಿರೀಕ್ಷಕ ರಾಗ್ಯಾ ನಾಯ್ಕ್, ಆಹಾರ ಸುರಕ್ಷತಾಧಿಕಾರಿಗಳಾದ ತಿರುಮಲೇಶ್, ನಾಗೇಶ್, ಕೆನರಾ ಬ್ಯಾಂಕ್ ಆರ್ಥಿಕ ಸಲಹೆಗಾರ ತಿಪ್ಪೇಸ್ವಾಮಿ, ಸಂಪನ್ಮೂಲ ವ್ಯಕ್ತಿ ಸುರೇಶ್‌ರಾವ್, ಕೆಪಿಎಂ ಗಣೇಶಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net