ಆನ್ಲೈನ್ ವಂಚನೆ: ಅಸ್ಸಾಂನ ಮೂವರ ಬಂಧನ

12 - Copy
Published on

ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಯುವತಿಯನ್ನು ಪರಿಚಯಿಸಿಕೊಂಡು ವಿದೇಶದಿಂದ ಗಿಫ್ಟ್ ಕಳುಹಿಸಿ ಕೊಡುವುದಾಗಿ ವಿವಿಧ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡು ವಂಚಿಸಿದ್ದ ಅಸ್ಸಾಂನ ಮೂವರು ಆರೋಪಿಗಳನ್ನು ಜಿಲ್ಲಾ ಸೆನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂನ ಕರಿಮ್‌ಗಂಜ್ ಜಿಲ್ಲೆಯ ಸಿಂಬುಲಾಲ್ ಚೊರಾಯತ್(26), ಲಾಲ್ ಸಂಗೀಕಾರ್ ಚೊರಾಯತ್(23) ಹಾಗೂ ಹರಿಲಾಲ್ ಚೊರಾಯತ್(22) ಬಂಧಿತರು. ಇವರಿಂದ 26 ಸಾವಿರ ರೂ. ನಗದು, 6 ಮೊಬೈಲ್, 2 ಬ್ಯಾಂಕ್ ಪಾಸ್ ಪುಸ್ತಕ , ಮನೆಯ ಬಾಡಿಗೆ ಕರಾರು ಪತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಸೀಮಾ ಲಾಟ್ಕರ್ ತಿಳಿಸಿದರು.

ಘಟನೆ ವಿವರ: ಆರೋಪಿಗಳು ಇನ್‌ಸ್ಟಾಗ್ರಾಮ್ ಮೂಲಕ ಜನರನ್ನು ಪರಿಚಯ ಮಾಡಿಕೊಂಡು ವಾಟ್ಸ್‌ಆ್ಯಪ್ ಚಾಟಿಂಗ್ ಮೂಲಕ ಬೆಲೆ ಬಾಳುವ ಉಡುಗೊರೆ ಕಳುಹಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಹಣ ಪಡೆದುಕೊಂಡು ವಂಚಿಸುತ್ತಿದ್ದರು.

ಇದೇ ರೀತಿ ನಂಜನಗೂಡು ತಾಲೂಕು ಬದನವಾಳು ಗ್ರಾಮದ ಹಿಮಶ್ವೇತಾ ಎಂಬುವರಿಗೆ ರಾಬರ್ಟ್ ಎಡ್ಗರ್ ಎಂಬ ಹೆಸರಿನಲ್ಲಿ ಪರಿಚಯಿಸಿಕೊಂಡ ಆರೋಪಿಯು ಐ ಫೋನ್ ಹಾಗೂ ಇತರ ಬೆಲೆ ಬಾಳುವ ವಸ್ತುಗಳನ್ನು ಗಿಫ್ಟ್ ನೀಡುತ್ತಿದ್ದು, ದಿಲ್ಲಿ ಏರ್‌ಪೋರ್ಟ್‌ನಿಂದ ಕರೆ ಬಂದಾಗ ಅವರ ಖಾತೆಗೆ ಹಣ ಹಾಕಿ ಪಡೆದುಕೊಳ್ಳುವಂತೆ ನಂಬಿಸಿದ್ದಾನೆ. ಬಳಿಕ ಆತ ಹೇಳಿದ ಖಾತೆಗೆ 4.77 ಲಕ್ಷ ರೂ. ಪಾವತಿಸಿದರೂ ಗಿಫ್ಟ್ ಬರದ ಹಿನ್ನೆಲೆಯಲ್ಲಿ 2022ರ ಸೆ.4ರಂದು ಹಿಮಶ್ವೇತಾ ಸೆನ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ತನಿಖೆ ಆರಂಭಿಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇವರೆಲ್ಲರಿಗೂ ಮಾರ್ಗದರ್ಶನ ಮಾಡಿ ಎಲ್ಲ ಹಣವನ್ನು ಪಡೆಯುತ್ತಿದ್ದ ನೈಜಿರಿಯಾ ಪ್ರಜೆ ನಾಪತ್ತೆಯಾಗಿದ್ದಾನೆ ಎಂದು ಎಸ್‌ಪಿ ತಿಳಿಸಿದರು.
ಪತ್ತೆ ಕಾರ್ಯದಲ್ಲಿ ಸೆನ್ ಪೊಲೀಸ್ ಠಾಣೆಯ ನಿರೀಕ್ಷಕ ಶಬ್ಬೀರ್ ಹುಸೇನ್, ಉಪ ನಿರೀಕ್ಷಕ ಲೋಕೇಶ್, ಸಿಬ್ಬಂದಿ ಮಂಜುನಾಥ್ ರಂಗಸ್ವಾಮಿ, ಬಿ.ವಿ. ಮಂಜುನಾಥ, ಮಹದೇಸ್ವಾಮಿ, ವೆಂಕಟೇಶ್, ಪುಷ್ಪಲತಾ, ಮಹೇಶ್, ಮಹೇಶ್‌ಕುಮಾರ್, ಆದರ್ಶ್, ಸಿಂಧು ಭಾಗಿಯಾಗಿದ್ದರು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net