

ತಿ.ನರಸೀಪುರ: ಬೆಟ್ಟಿಂಗ್ ಆ್ಯಪ್‌ಗಳನ್ನು ರದ್ದುಪಡಿಸುವ ಮೂಲಕ ಆನ್‌ಲೈನ್ ಬೆಟ್ಟಿಂಗ್ ರದ್ದುಪಡಿಸುವಂತೆ ಆಗ್ರಹಿಸಿ, ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರ ಹಾಗೂ ಮುಖಂಡರು ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದಿಂದ ಪ್ರತಿಭಟನೆಯನ್ನು ಪ್ರಾರಂಭಿಸಿದ ಸಂಘಟನೆಯ ಕಾರ್ಯಕರ್ತರು ಆನ್‌ಲೈನ್ ಬೆಟ್ಟಿಂಗ್ ದಂಧೆಯ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗುತ್ತಾ ಲಿಂಕ್ ರಸ್ತೆ ಹಾಗೂ ಕಾಲೇಜು ರಸ್ತೆಯ ಮೂಲಕ ತಾಲೂಕು ಕಚೇರಿಗೆ ಆಗಮಿಸಿ, ಗ್ರೆಡ್-2 ತಹಸೀಲ್ದಾರ್ ರಾಜಾಕಾಂತ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಜಿ.ಮುರುಗನ್ ಮಾತನಾಡಿ, ಆನ್‌ಲೈನ್ ಬೆಟ್ಟಿಂಗ್ ದಂಧೆ ವ್ಯಾಪಕವಾಗುತ್ತಿರುವ ಪರಿಣಾಮ ಯುವಕರು ಹಾಗೂ ವಿದ್ಯಾರ್ಥಿಗಳು ದಂಧೆಗೆ ಬಲಿಯಾಗಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೋಟಕುಗೊಳಿಸಿಕೊಂಡು ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಕೂಲಿ ಮಾಡಿ ಜೀವನ ನಡೆಸುವ ಮಧ್ಯಮ ವರ್ಗ ಜನರು ಹಾಗೂ ಬಡ ಕೂಲಿ ಕಾರ್ಮಿಕರು ಕೂಡ ಬೆಟ್ಟಿಂಗ್ ಆಸೆಗೆ ದುಡಿದ ಹಣವನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಒಟ್ಟಾರೆ ಆನ್‌ಲೈನ್ ಬೆಟ್ಟಿಂಗ್ ದಂಧೆ ಯುವಕರು ಹಾಗೂ ಬಡವರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಿರುವುದರಿಂದ ಸರ್ಕಾರ ಕೂಡಲೇ ಬೆಟ್ಟಿಂಗ್ ಆ್ಯಪ್‌ಗಳನ್ನು ರದ್ದುಗೊಳಿಸಬೇಕು. ತಪ್ಪಿದ್ದಲ್ಲಿ ನಮ್ಮ ಕರ್ನಾಟಕ ಸೇನೆ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಎಚ್ಚರಿಸಿದರು.
ತಾಲೂಕು ಮಹಿಳಾ ಅಧ್ಯಕ್ಷೆ ವಿ.ಮಂಜುಳಾ ಮಾತನಾಡಿ, ಬಹುತೇಕ ಜನರು ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಬಲೆಗೆ ಸಿಲುಕಿ, ಕುಟುಂಬವನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಹಣ ಕಳೆದುಕೊಂಡ ಮನೆಯ ಮಕ್ಕಳು ಹಾಗೂ ಮಹಿಳೆಯರು ಕಣ್ಣೀರಿನಲ್ಲಿ ಬದುಕುತ್ತಿದ್ದಾರೆ. ಯುವಕರ ಭವಿಷ್ಯ ಹಾಗೂ ಬಡವರ ಬದುಕು ಹಾಳಾಗುವುದನ್ನು ತಪ್ಪಿಸಲು ಆನ್‌ಲೈನ್ ಆ್ಯಪ್‌ಗಳನ್ನು ಈಗಾಗಲೇ ನೆರೆಯ ತೆಲಂಗಾಣ, ಒಡಿಶಾ, ಅಸ್ಸಾಂ ಹಾಗೂ ಹಲವು ರಾಜ್ಯಗಳಲ್ಲಿ ರದ್ದುಪಡಿಸಲಾಗಿದೆ. ಆದ್ದರಿಂದ ಸರ್ಕಾರ ರಾಜ್ಯದಲ್ಲಿಯೂ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳನ್ನು ಕೂಡಲೆ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಮಾದೇಶ್, ಗೌರವಾಧ್ಯಕ್ಷ ಅಂಬರೀಶ್, ಉಪಾಧ್ಯಕ್ಷ ಎಂ.ಗಣೇಶ್, ಪ್ರಧಾನ ಕಾರ್ಯದರ್ಶಿ ಬಸವರಾಜು, ಸಂಚಾಲಕ ರವಿ, ಜಂಟಿ ಕಾರ್ಯದರ್ಶಿ ಲಿಂಗರಾಜು, ಮುಖಂಡರಾದ ಪ್ರದೀಪ್, ಕೃಷ್ಣ, ಚೇತನ್, ಮಹದೇವ ನಾಯಕ, ನಾಗೇಂದ್ರ, ರಾಮು, ಸುಭಾಷ್, ವಿಕಾಸ, ವೆಂಕಟರಮಣ, ರಘು, ಮಂಜುನಾಥ ನಾಯಕ, ಶ್ರೀನಿವಾಸ, ಲೋಕೇಶ್, ನಾಗೇಂದ್ರ, ಮೂರ್ತಿ, ಕೃಷ್ಣಸ್ವಾಮಿ, ರಾಚಪ್ಪಾಜಿ, ಪುಟ್ಟಸ್ವಾಮಿ, ಮಣಿ, ಜೋಗಿ, ಲಕ್ಷ್ಮೀ, ಶೃತಿ, ಕೆ.ಶೋಭಾ, ಎಸ್. ಸುಮಾ, ಸವಿತಾ, ಹೇಮಾ, ಸುಶೀಲಾ, ಲಕ್ಷ್ಮಮ್ಮ ಇತರರಿದ್ದರು.