ಆನ್‌ಲೈನ್ ಬೆಟ್ಟಿಂಗ್ ಗೇಮ್ ಆ್ಯಪ್ ನಿಷೇಧಿಸಿ:ಪ್ರತಿಭಟನೆ

ಆನ್‌ಲೈನ್ ಬೆಟ್ಟಿಂಗ್ ಗೇಮ್ ಆ್ಯಪ್ ನಿಷೇಧಿಸಿ:ಪ್ರತಿಭಟನೆ
Published on

ಹಾಸನ: ಕಾನೂನು ಬಾಹಿರವಾಗಿ ಮತ್ತು ಅಕ್ರಮವಾಗಿ ನಡೆಸುತ್ತಿರುವ ಆನ್‌ಲೈನ್ ಬೆಟ್ಟಿಂಗ್ ಗೇಮ್ ಆ್ಯಪ್‌ಗಳನ್ನು ನಿಷೇಧಿಸಿ ಇವುಗಳನ್ನು ನಡೆಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸೇನೆಯ ಜಿಲ್ಲಾಧ್ಯಕ್ಷ ಭಾನುಪ್ರಕಾಶ್ ಸುದ್ದಿಗಾರರೊಂದಿಗೆ ಮಾತನಾಡಿ, ಆನ್‌ಲೈನ್ ಬೆಟ್ಟಿಂಗ್ ಹಾಗೂ ಆನ್‌ಲೈನ್ ಗೇಮಿಂಗ್ ವೆಬ್‌ಸೈಟ್‌ಗಳನ್ನು ಇಂದು ನೌಕರರು, ಯುವಕರು ಚಟವಾಗಿಸಿಕೊಂಡಿದ್ದು, ಇದರಿಂದ ಹಲವಾರು ಕುಟುಂಬಗಳು ಬೀದಿಗೆ ಬಂದಿದೆ. ಹಲವಾರು ಯುವಕರು, ವಿದ್ಯಾರ್ಥಿಗಳು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗಾಗಲೇ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪಿಯಲ್ಲಿ ಬೆಟ್ಟಿಂಗ್ ಗೇಮ್‌ಗಳನ್ನು ನಡೆಸುತ್ತಿದ್ದ ಇಬ್ಬರು ಬುಕ್ಕಿಗಳ ಮೇಲೆ ಎಫ್‌ಐರ್ ದಾಖಲಿಸಿದ್ದಾರೆ. ಇದರ ಬಗ್ಗೆ ಇನ್ನು ಹೆಚ್ಚಿನ ರೀತಿಯಲ್ಲಿ ಜನರಿಗೆ ಇದರ ಬಗ್ಗೆ ಅರಿವು ಮೂಡಿಸಲು ಹಾಗೂ ಈ ರೀತಿಯಾಗಿ ಮೋಸ ಮಾಡುವ ಉದ್ದೇಶದಿಂದಲೇ ಜನರನ್ನು ವಂಚಿಸುತ್ತಿರುವ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಹಾಗೂ ವೆಬ್ ಸೈಟ್‌ಗಳನ್ನು ರಾಜ್ಯಾದ್ಯಂತ ನಿಷೇಧಿಸಬೇಕೆಂದು ಆಗ್ರಹಿಸಿದರು.
ಒಕ್ಕಲಿಗರ ಸಂಘದ ಸದಸ್ಯ ರಾಜೇಶ್ ಗೌಡ ಮಾತನಾಡಿ, ಮನೆ ಹಾಳು ಮಾಡುವ ಯಾವುದೇ ಜೂಜಾಟಗಳನ್ನು ಕರ್ನಾಟಕದಲ್ಲಿ ನಿಷೇಧ ಮಾಡಬೇಕು. ಹಿಂದೆ ಇದ್ದಂತಹ ಸರ್ಕಾರಗಳು ಸಾರಾಯಿ, ಲಾಟರಿ ನಿಷೇಧ ಮಾಡಿದಂತೆ ಇಂದು ಕೂಡ ಆನ್‌ಲೈನ್ ಜೂಜಾಟದ ಆ್ಯಪ್‌ಗಳನ್ನು ನಿಷೇಧಿಸಬೇಕು. ಈ ಆಟದಿಂದ ಯುವಕರು, ಯುವತಿಯರು, ಅಧಿಕಾರಿಗಳು ತಮ್ಮ ಹಣ ಕಳೆದುಕೊಂಡು ಬೀದಿಗೆ ಬರುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಈ ಆನ್‌ಲೈನ್ ಜೂಜಾಟದ ಆ್ಯಪ್‌ಗಳನ್ನು ನಿಷೇಧಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಮ್ಮ ಕರ್ನಾಟಕ ಸೇನೆಯ ಚಂದನ್ ಗೌಡ, ಪ್ರವೀಣ್ ಗೌಡ, ಆರೀಫ್, ತನುಪ್ರಿಯಾ, ಮಮತಾ, ಕುಮಾರ್, ಪ್ರದೀಪ್, ಗುರುಪ್ರಸಾದ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net